ಉಡುಪಿಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಳಸರ್ಪ ಯೋಗ ಪ್ರಸ್ತಾಪ: ದೇಶ-ಲೋಕಕ್ಕೆ ಅನಾಹುತದ ಭೀತಿ! |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಇತ್ತೀಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಳಸರ್ಪ ಯೋಗದ ಪರಿಣಾಮದಿಂದ ಜಗತ್ತಿನಲ್ಲಿ ವಿವಿಧ ಅನಾಹುತಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಪ್ರಸ್ತಾಪವಾಗಿದೆ ಎಂದು ಮಠದ ಪ್ರಮುಖರು ತಿಳಿಸಿದ್ದಾರೆ.
ಮಠದ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲ ಗ್ರಹಗಳು ಬರುವ ಕಾಳಸರ್ಪ ಯೋಗದ ಕುರಿತು ಚರ್ಚೆಯಾಗಿದ್ದು, ಇದರ ಪರಿಣಾಮ ಭೂಮಂಡಲದ ಮೇಲೆ ಇರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.


ಪ್ರಾಕೃತಿಕ ವಿಕೋಪಗಳು, ರಾಜಕೀಯ ಅಸ್ಥಿರತೆ, ಯುದ್ಧ ಹಾಗೂ ಕೊರೋನಾ ಮಾದರಿಯ ಸಾಂಕ್ರಾಮಿಕ ಕಾಯಿಲೆಗಳ ಭೀತಿಯ ಬಗ್ಗೆಯೂ ಅಷ್ಟಮಂಗಲ ಪ್ರಶ್ನೆಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಲಾಗಿದೆ. ಡಿಸೆಂಬರ್ ಒಳಗಾಗಿ ಇಂತಹ ಪರಿಣಾಮಗಳು ಗೋಚರಿಸಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎನ್ನಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗಲಾಟೆಗಳು ಹಾಗೂ ಉಕ್ರೇನ್ ಯುದ್ಧ ಸೇರಿದಂತೆ ಜಾಗತಿಕ ಬೆಳವಣಿಗೆಗಳನ್ನೂ ಇದರೊಂದಿಗೆ ಜೋಡಿಸಿ ನೋಡಲಾಗಿದೆ.
18 ಕೋಟಿ ರಾಮ ಮಂತ್ರ ಜಪ, ಒಂದು ಕೋಟಿ ಕೃಷ್ಣ ಮಂತ್ರ ಜಪ, ಒಂದು ಲಕ್ಷ ವಿಷ್ಣು ಸಹಸ್ರನಾಮ ಪಠಣ ಸೇರಿದಂತೆ ವಿವಿಧ ಜಪ ಹಾಗೂ ಧಾರ್ಮಿಕ ಅನುಷ್ಠಾನಗಳನ್ನು ನಡೆಸುವಂತೆ ಪರಿಹಾರ ಸೂಚಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಲೋಕದ ಭಕ್ತರು ಹಾಗೂ ಜನರು ಒಟ್ಟಾಗಿ ಈ ಅನುಷ್ಠಾನಗಳಲ್ಲಿ ಪಾಲ್ಗೊಂಡು ಲೋಕದ ಒಳಿತಿಗಾಗಿ ಪ್ರಾರ್ಥಿಸಬೇಕು ಎಂಬ ಸಂದೇಶ ನೀಡಲಾಗಿದೆ.


ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಮಾತನಾಡಿ, ಲೋಕದ ಜನರೆಲ್ಲರೂ ಒಗ್ಗೂಡಿ ಜಪ ಮತ್ತು ಅನುಷ್ಠಾನಗಳನ್ನು ನಡೆಸುವ ಮೂಲಕ ಲೋಕದ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದು ಹೇಳಿದರು.
ಶ್ರೀಕೃಷ್ಣ ಮಠದಲ್ಲಿ ತುಳಸಿ ಅರ್ಚನೆ, ಕೃಷ್ಣ ಮಂತ್ರ ಪಠಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶೀಘ್ರದಲ್ಲಿ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಠದ ದಿವಾಣ ಉದಯ ಸರಳತ್ತಾಯ ತಿಳಿಸಿದ್ದಾರೆ.


ಅಷ್ಟಮಂಗಲ ಪ್ರಶ್ನೆ ಮತ್ತು ಜ್ಯೋತಿಷ್ಯ ನಂಬಿಕೆಗಳ ಆಧಾರದ ಮೇಲೆ ಈ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಇವುಗಳಿಗೆ ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲ. ಇದೀಗ ಅಷ್ಟಮಿ ಸಂಭ್ರಮದ ಬಳಿಕ ಲೋಕದ ಒಳಿತಿಗಾಗಿ ಧಾರ್ಮಿಕ ಅನುಷ್ಠಾನಗಳನ್ನು ನಡೆಸಲು ಶ್ರೀಕೃಷ್ಣ ಮಠ ಸಿದ್ಧತೆ ನಡೆಸುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!