ಮಂಗಳೂರಿನಲ್ಲಿ ನಡೆಯಲಿರುವ ಸಭೆ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಲೇವಡಿ
ಉಡುಪಿ: ಕರಾವಳಿ ಭಾಗದ ಅಭಿವೃದ್ಧಿ ವಿಚಾರವಾಗಿ ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಲೇವಡಿ ಮಾಡಿದ್ದಾರೆ.

‘ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ಕರೆದು ಏನು ಮಾಡುತ್ತಾರೆ? ಕೇವಲ ಕರಾವಳಿಯ ಮೀನು ತಿನ್ನಲು ಕ್ಯಾಬಿನೆಟ್ ಸಭೆ ನಡೆಸುತ್ತಿದ್ದಾರೆಯೇ?’ ಎಂದು ಅವರು ಪ್ರಶ್ನಿಸಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ‘ಹಿಂದೆ ಸಿದ್ದರಾಮಯ್ಯ ಅವರು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ನೂರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಆಶ್ವಾಸನೆ ನೀಡಿದ್ದರು. ಅವುಗಳಲ್ಲಿ ಎಷ್ಟು ಈಡೇರಿವೆ?’ ಎಂದು ಪ್ರಶ್ನಿಸಿದರು.
‘ಕರಾವಳಿ ಭಾಗದಲ್ಲಿ ವಾತಾವರಣ ಕೆಡಿಸಲು ಈ ಸಭೆ ನಡೆಸಲಾಗುತ್ತಿದೆ. ಇದು ಕೇವಲ ವೋಟ್ ಬ್ಯಾಂಕ್ ಉದ್ದೇಶದಿಂದ ನಡೆಯುತ್ತಿರುವ ಸಚಿವ ಸಂಪುಟ ಸಭೆ’ ಎಂದು ಆರೋಪಿಸಿದರು.

ವಿಧಾನಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸುತ್ತಾರೆ. ಆದರೆ ಆ ವಿಚಾರಗಳು ಎಲ್ಲಿ ಅನುಷ್ಠಾನಗೊಂಡಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು.

