ಉಡುಪಿ: ಉಡುಪಿ ಜಿಲ್ಲೆಯ ಕೋಟೆಗಾರ ರಾಮಕ್ಷತ್ರಿಯ ಸಮುದಾಯದ ಸದಸ್ಯರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಸಮುದಾಯದ ಬಲವರ್ಧನೆ ಹಾಗೂ ಭವಿಷ್ಯದ ಪೀಳಿಗೆಯ ಅಭಿವೃದ್ಧಿಗೆ ಪೂರಕವಾದ ಸಂಘಟನೆಯನ್ನು ರೂಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಉಡುಪಿ ಜಿಲ್ಲಾ ಕೋಟೆಗಾರ ರಾಮಕ್ಷತ್ರಿಯ ಒಕ್ಕೂಟ (ರಿ.)ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅ.11ರಂದು ಬೈಂದೂರಿನಲ್ಲಿ ನಡೆಯಲಿದೆ.

ಬೈಂದೂರಿನ ಯಡ್ತರೆ ರಾಷ್ಟ್ರೀಯ ಹೆದ್ದಾರಿ–66ರಲ್ಲಿರುವ ಜೆಎನ್‌ಆರ್ ಕಲಾಭವನದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ .ಉಡುಪಿ ಜಿಲ್ಲೆಯಾದ್ಯಂತ ಇರುವ ಕೋಟೆಗಾರ ರಾಮಕ್ಷತ್ರಿಯ ಸಮುದಾಯದ ಸದಸ್ಯರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ. ಸಮುದಾಯದ ಬಲಿಷ್ಠ, ಸಮೃದ್ಧ ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಸಮನ್ವಯಗೊಳಿಸಿ, ಸಮಾಜದ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ದೃಷ್ಟಿಯಿಂದ ಒಕ್ಕೂಟವನ್ನು ಸ್ಥಾಪಿಸಲಾಗಿದೆ.

ಸಮುದಾಯದ ಏಕತೆ, ಪರಸ್ಪರ ಸಹಕಾರ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಾಮಾಜಿಕ ಹಾಗೂ ಸಮುದಾಯಮುಖಿ ಚಟುವಟಿಕೆಗಳನ್ನು ರೂಪಿಸುವ ಉದ್ದೇಶವನ್ನು ಒಕ್ಕೂಟ ಹೊಂದಿದೆ. ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

