ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೇವಲ ಶೇ.50ರಷ್ಟು ಮಾತ್ರ e-KYC ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳಿಗೆ ಸುಲಭ ಹಾಗೂ ಪರ್ಯಾಯ ವಿಧಾನಗಳ ಮೂಲಕ e-KYC ಪೂರ್ಣಗೊಳಿಸಲು ಅವಕಾಶ ಕಲ್ಪಿಸುವುದು ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಕೋಶಾಧಿಕಾರಿ ಯಾಸೀನ್ ಅರ್ಕುಳ ಒತ್ತಾಯಿಸಿದ್ದಾರೆ.

‘ಅನ್ನ ಸೇವೆ’ ಮೊಬೈಲ್ ಆ್ಯಪ್ ಸೌಲಭ್ಯವನ್ನು ಕೆಲವು ಜಿಲ್ಲೆಗಳಿಗೆ ವಿಸ್ತರಿಸಿರುವ ಸಂದರ್ಭದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಫಲಾನುಭವಿಗಳಿಗೂ ಇದೇ ರೀತಿಯ ಡಿಜಿಟಲ್ ಸೌಲಭ್ಯ ಕಲ್ಪಿಸದೆ, ನಿಗದಿತ ಅವಧಿಯೊಳಗೆ e-KYC ಪೂರ್ಣಗೊಳಿಸುವಂತೆ ಒತ್ತಡ ಹೇರುವುದು ಸಮಾನ ಅವಕಾಶ ಮತ್ತು ನ್ಯಾಯಸಮ್ಮತ ಆಡಳಿತದ ದೃಷ್ಟಿಯಿಂದ ಸರಿಯಲ್ಲ ಎಂದು ಅವರು ಹೇಳಿದ್ದಾರೆ.
e-KYC ಪ್ರಕ್ರಿಯೆ ಪೂರ್ಣಗೊಳಿಸುವ ಸಂದರ್ಭದಲ್ಲಿ ತಾಂತ್ರಿಕ ದೋಷಗಳು, ಸರ್ವರ್ ಸಮಸ್ಯೆಗಳು, ಸೇವಾ ಕೇಂದ್ರಗಳಲ್ಲಿನ ಜನದಟ್ಟಣೆ ಹಾಗೂ ಫಲಾನುಭವಿಗಳ ವೈಯಕ್ತಿಕ ಅಡಚಣೆಗಳಿಂದಾಗಿ ವಿಳಂಬವಾಗುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಆಡಳಿತಾತ್ಮಕ ಅಥವಾ ತಾಂತ್ರಿಕ ಕಾರಣಗಳಿಂದ e-KYC ಪೂರ್ಣಗೊಳಿಸಲು ಸಾಧ್ಯವಾಗದ ಅರ್ಹ ಫಲಾನುಭವಿಗಳ ಆಹಾರ ಭದ್ರತೆಯ ಹಕ್ಕಿಗೆ ಧಕ್ಕೆಯಾಗದಂತೆ ಸರ್ಕಾರ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.

ಸರ್ಕಾರದ ಡಿಜಿಟಲ್ ವ್ಯವಸ್ಥೆಯ ಲಭ್ಯತೆ ಹಾಗೂ ಅದರ ಕಾರ್ಯನಿರ್ವಹಣಾ ಸಾಮರ್ಥ್ಯವು ಫಲಾನುಭವಿಗಳ ನಿಯಂತ್ರಣದಲ್ಲಿರುವುದಿಲ್ಲ. ಹೀಗಿರುವಾಗ, ಸರ್ಕಾರಿ ವ್ಯವಸ್ಥೆಯ ತಾಂತ್ರಿಕ ಮತ್ತು ಆಡಳಿತಾತ್ಮಕ ಮಿತಿಗಳ ಪರಿಣಾಮವನ್ನು ಅರ್ಹ ಫಲಾನುಭವಿಗಳ ಮೇಲೆ ಹೊರಿಸುವುದು ನ್ಯಾಯಸಮ್ಮತವಲ್ಲ. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯಾವುದೇ ತೊಂದರೆಯಿಲ್ಲದೆ e-KYC ಪೂರ್ಣಗೊಳಿಸಲು ಸಾಕಷ್ಟು ಕಾಲಾವಕಾಶ ಹಾಗೂ ಪ್ರಾಯೋಗಿಕ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ.
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಅರ್ಹ ಫಲಾನುಭವಿಗಳ e-KYC ಪ್ರಕ್ರಿಯೆ ಬಾಕಿ ಉಳಿದಿರುವಾಗ, ಅಕ್ಟೋಬರ್ 20ರ ಗಡುವನ್ನು ಅಂತಿಮವೆಂದು ಪರಿಗಣಿಸುವ ಬದಲು, ನೆಲಮಟ್ಟದ ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ಸಮಂಜಸವಾದ ಹೆಚ್ಚುವರಿ ಕಾಲಾವಕಾಶ ನೀಡಬೇಕು. ಗಡುವು ಮೀರಿದ ಕಾರಣಕ್ಕೆ ಅರ್ಹ ಕುಟುಂಬಗಳ ಪಡಿತರ ಸೌಲಭ್ಯ ಸ್ಥಗಿತಗೊಳ್ಳದಂತೆ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಈ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದ್ದರಿಂದ, ದಕ್ಷಿಣ ಕನ್ನಡ ಜಿಲ್ಲೆಯನ್ನು ತಕ್ಷಣವೇ ‘ಅನ್ನ ಸೇವೆ’ ಮೊಬೈಲ್ ಆ್ಯಪ್‌ನ ವ್ಯಾಪ್ತಿಗೆ ತರಬೇಕು. ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಮೊಬೈಲ್ ಮೂಲಕ e-KYC ಪೂರ್ಣಗೊಳಿಸಲು ಸಮಾನ ಅವಕಾಶ ಕಲ್ಪಿಸಬೇಕು. ಅಕ್ಟೋಬರ್ 20ರ ಗಡುವನ್ನು ವಿಸ್ತರಿಸುವುದರ ಜೊತೆಗೆ, ತಾಂತ್ರಿಕ ಅಥವಾ ಆಡಳಿತಾತ್ಮಕ ಕಾರಣಗಳಿಂದ ಯಾವುದೇ ಅರ್ಹ ಫಲಾನುಭವಿಯೂ ಆಹಾರ ಭದ್ರತಾ ಸೌಲಭ್ಯದಿಂದ ವಂಚಿತರಾಗದಂತೆ ಸರ್ಕಾರ ಖಚಿತಪಡಿಸಬೇಕು ಎಂದು ಯಾಸೀನ್ ಅರ್ಕುಳ ಒತ್ತಾಯಿಸಿದ್ದಾರೆ.

