ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ರೂಪುಗೊಳ್ಳುತ್ತಿದೆ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ತಂಗುದಾಣ; 35 ಕೋಟಿ ರೂ. ವೆಚ್ಚದ ಯೋಜನೆಗೆ ಚುರುಕು

​ಮಂಜೇಶ್ವರ: ದೀರ್ಘದೂರ ಪ್ರಯಾಣಿಕರ ಆಯಾಸ ಪರಿಹರಿಸಿ ವಿಶ್ರಮಿಸಲು ಹಾಗೂ ಸುರಕ್ಷಿತವಾಗಿ ಮುಂದಿನ ಪ್ರಯಾಣವನ್ನು ಯೋಜಿಸಲು ಮಂಜೇಶ್ವರದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಮತ್ತು ವಾಮಂಜೂರು ಚೆಕ್ ಪೋಸ್ಟ್ ನಡುವೆ ಅಂತಾರಾಷ್ಟ್ರೀಯ ಮಾನದಂಡದ ಬೃಹತ್ ಹೈವೇ ಕಾಂಪ್ಲೆಕ್ಸ್ ವಝಿಯೋರಂ ವಿಶ್ರಮಕೇಂದ್ರ ನಿರ್ಮಾಣ ಕಾರ್ಯಗಳು ವೇಗವಾಗಿ ಪ್ರಗತಿಯಲ್ಲಿವೆ.

​ಒವರ್ಸೀಸ್ ಕೇರಳೈಟ್ಸ್ ಇನ್ವೆಸ್ಟ್ಮೆಂಟ್ ಆಂಡ್ ಹೋಲ್ಡಿಂಗ್ ಲಿಮಿಟೆಡ್ ಸಂಸ್ಥೆಯು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಈ ಕನಸಿನ ಯೋಜನೆಗೆ ‘ಕಿಫ್ಬಿ’ ವತಿಯಿಂದ ಧನಸಹಾಯ ನೀಡಲಾಗುತ್ತಿದ್ದು, 35 ಕೋಟಿ ರೂಪಾಯಿಗೂ ಅಧಿಕ ವೆಚ್ಚವನ್ನು ಅಂದಾಜಿಸಲಾಗಿದೆ.

​ಕೇರಳದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ 30 ಪ್ರಮುಖ ಕೇಂದ್ರಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ನೆಟ್‌ವರ್ಕ್‌ನ ಭಾಗವಾಗಿ ಈ ಕೇಂದ್ರವೂ ಸಜ್ಜಾಗುತ್ತಿದೆ.

ಡ್ರೈವ್-ಇನ್ ಮೋಟೆಲ್ ಕೊಠಡಿಗಳು, ಹೈಟೆಕ್ ಟ್ರಾವೆಲರ್ಸ್ ಲಾಂಜ್ ಹಾಗೂ ಮೀಟಿಂಗ್/ಕಾನ್ಫರೆನ್ಸ್ ಹಾಲ್‌ಗಳು.
​ಆಹಾರ ಮತ್ತು ಶಾಪಿಂಗ್: ಪ್ರಸಿದ್ಧ ಬ್ರಾಂಡ್‌ಗಳ ರೆಸ್ಟೋರೆಂಟ್‌ಗಳು, ವಿಶಾಲವಾದ ಫುಡ್ ಕೋರ್ಟ್ ಮತ್ತು ಕನ್ವೀನಿಯನ್ಸ್ ಸ್ಟೋರ್‌ಗಳು.
ಇಂಧನ ಭರ್ತಿ ಕೇಂದ್ರಗಳು, ತುರ್ತು ವಾಹನ ದುರಸ್ತಿ ವರ್ಕ್‌ಶಾಪ್‌ಗಳು ಮತ್ತು ಇವಿ ಚಾರ್ಜಿಂಗ್,
​ಇತರ ಸೌಲಭ್ಯಗಳು: ಉನ್ನತ ಗುಣಮಟ್ಟದ ಶೌಚಾಲಯಗಳು, ಪ್ರಥಮ ಚಿಕಿತ್ಸಾ ಕ್ಲಿನಿಕ್ ಹಾಗೂ ಕ್ಯಾರವಾನ್ ಪಾರ್ಕಿಂಗ್ ವ್ಯವಸ್ಥೆ ಸಜ್ಜಾಗುತ್ತಿದೆ.

​ಜಿಎಸ್‌ಟಿ ಜಾರಿಗೆ ಬಂದ ನಂತರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಹಳೆಯ ವಾಣಿಜ್ಯ ತೆರಿಗೆ ಇಲಾಖೆ ಚೆಕ್ ಪೋಸ್ಟ್‌ನ 9 ಎಕರೆಗೂ ಅಧಿಕ ಜಾಗದ ಪೈಕಿ 5 ಎಕರೆ ಭೂಮಿಯನ್ನು ಈ ಯೋಜನೆಗಾಗಿ ಹಸ್ತಾಂತರಿಸಲಾಗಿದೆ. ಪ್ರಮುಖ ನಿರ್ಮಾಣ ಸಹಕಾರ ಸಂಘವಾದ ‘ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿ’ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

​ಎರಡು ವರ್ಷಗಳ ಒಳಗೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಈ ಯೋಜನೆ ಸಾಕಾರಗೊಳ್ಳುವುದರೊಂದಿಗೆ ಉತ್ತರ ಮಲಬಾರ್ ಭಾಗದ ರಾಷ್ಟ್ರೀಯ ಹೆದ್ದಾರಿ ಪ್ರಯಾಣಕ್ಕೆ ಹೊಸ ಮೆರುಗು ಸಿಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!