ಪಡಿತರ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣಗೊಳಿಸಿ: ಆಮ್ ಆದ್ಮಿ ಪಾರ್ಟಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ವಿತರಣೆಯಲ್ಲಿನ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ, ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ 2,58,910 ಹಾಗೂ ಉಡುಪಿಯಲ್ಲಿ 1,98,265 ಪಡಿತರ ಚೀಟಿದಾರರಿದ್ದು, ಸರ್ವರ್ ಸಮಸ್ಯೆ, ಇ-ಕೆವೈಸಿ ವಿಳಂಬ ಸೇರಿದಂತೆ ವಿವಿಧ ತಾಂತ್ರಿಕ ತೊಂದರೆಗಳಿಂದ ಬಡವರು ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಇದರಿಂದ ಕೂಲಿ ಕಾರ್ಮಿಕರು ದಿನಗೂಲಿ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಪಡಿತರ ಧಾನ್ಯಗಳ ಮನೆಬಾಗಿಲು ವಿತರಣೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಆಹಾರ ಭದ್ರತೆ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಪಡಿತರ ವಿತರಣೆಯನ್ನು ಗೌರವಯುತ ಹಾಗೂ ಪಾರದರ್ಶಕ ರೀತಿಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಶಕ್ತಿ ಯೋಜನೆಯಡಿ ಅಂತರರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವಿಲ್ಲ. ಆದರೆ ಕೇರಳದ ಅಂತರರಾಜ್ಯ ಬಸ್‌ಗಳಲ್ಲಿ ಕಾಸರಗೋಡು–ಮಂಗಳೂರು ಮಾರ್ಗದಲ್ಲಿ ಕರ್ನಾಟಕದ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲೂ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ಮಾರ್ಗಗಳಲ್ಲಿ ಮಹಿಳೆಯರಿಗೆ ಸೌಲಭ್ಯ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ದ.ಕ. ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ಕಬೀರ್ ಕಾಟಿಪಳ್ಳ, ಗ್ಲಾವಿನ್ ಡಿಸೋಜ ಹಾಗೂ ಲೆಸ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!