ಪುತ್ತೂರು: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ದಸರಾ ನಾಡಹಬ್ಬ ಸಮಿತಿ ವತಿಯಿಂದ ೭೨ನೇ ದಸರಾ ನಾಡಹಬ್ಬ ವೈಚಾರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ ೧೧ ರಿಂದ ೨೦ರವರೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ಸಭಾಭವನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ಎಂ.ಟಿ.ಜಯರಾಮ ಭಟ್ ಮತ್ತು ಸಮಿತಿ ಗೌರವಾಧ್ಯಕ್ಷರಾದ ಎನ್.ಕೆ.ಜಗನ್ನೀವಾಸ ರಾವ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೩೧ರಲ್ಲಿ ಡಾ|ಶಿವರಾಮ ಕಾರಂತರು ದಸರಾ ನಾಡಹಬ್ಬ ಸಾಂಸ್ಕೃತಿಕ ಉತ್ಸವವನ್ನು ಆರಂಭ ಮಾಡಿದರು. ಅವರು ಪುತ್ತೂರಿನಲ್ಲಿ ಇರುವವರೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಅವರು ಪುತ್ತೂರು ಬಿಟ್ಟು ಹೋದ ಮೇಲೆ ಕೆಲವು ವರ್ಷ ದಸರಾ ಹಬ್ಬ ಕೂಡ ನಿಂತುಹೋಯಿತು. ಬಳಿಕ ಎ.ಪಿ.ಸದಾಶಿವ ರಾವ್ ನಾಡಹಬ್ಬ ಪುನರಾರಂಭಿಸಿದರು. ನಂತರ ಎನ್.ಕೆ.ಜಗನ್ನೀವಾಸ ರಾವ್ ಅವರು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದಾಗ ದೇವಸ್ಥಾನದ ಒಳಗಡೆ ಕಾರ್ಯಕ್ರಮ ಮಾಡಲು ಅನುಮತಿ ನೀಡಿದರು. ಬಳಿಕ ನಿರಂತರವಾಗಿ ನಡೆಯುತ್ತಿದ್ದ ನಾಡಹಬ್ಬ ಕೊರೋನಾ ಕಾಲದಲ್ಲಿ ೨ ವರ್ಷ ಮತ್ತೆ ನಿಂತಿತು. ಈಗ ಎರಡು ವರ್ಷದಿಂದ ಮತ್ತೆ ಕಾರ್ಯಕ್ರಮ ನಡೆಯುತ್ತಿದೆ. ಈ ಬಾರಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ಸಭಾಭವನದ ವೇದಿಕೆಗೆ ನಟರಾಜ ವೇದಿಕೆ ಎಂದು ಹೆಸರಿಟ್ಟು ಅಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಅ.೧೧ ಉದ್ಘಾಟನೆ, ೨೦ರಂದು ಸಮಾರೋಪ:
ಅ.೧೧ರಂದು ರವಿವಾರ ಸಂಜೆ ೬.೩೦ಕ್ಕೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪಯ್ಯ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಕೆ.ವಿ. ಭಾಗವಹಿಸಲಿದ್ದಾರೆ. ಬಳಿಕ ೭ ಗಂಟೆಯಿಂದ ಭರತನಾಟ್ಯ ಕಾರ್ಯಕ್ರಮ ನೃತ್ಯಧಾರೆ ನಡೆಯಲಿದೆ. ಅ.೨೦ರಂದು ಸಂಜೆ ೬.೩೦ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಸಮಿತಿ ಗೌರವಾಧ್ಯಕ್ಷರಾದ ಎನ್.ಕೆ.ಜಗನ್ನೀವಾಸ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ|ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಬಳಿಕ ಯಕ್ಷಕೂಟ ಪುತ್ತೂರು ಸಂಯೋಜನೆಯಲ್ಲಿ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಮೇಧಿನಿ ನಿರ್ಮಾಣ ಮಹಿಷ ವಧೆ ಯಕ್ಷಗಾನ ನಡೆಯಲಿದೆ. ಪ್ರತೀ ದಿನ ಸಂಜೆ ೬ ರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಿತಿ ಗೌರವಾಧ್ಯಕ್ಷರಾದ ಎನ್.ಕೆ.ಜಗನ್ನೀವಾಸ ರಾವ್ ಮಾತನಾಡಿ ಜನರ ಮನಸ್ಸಿಗೆ ಚಿಂತನೆ ಕೊಡುವ ದೃಷ್ಟಿಯಿಂದ ಪ್ರತೀದಿನ ವಿವಿಧ ವಿಷಯಗಳ ಬಗ್ಗೆ ಚಿಂತಕರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಲವು ವರ್ಷಗಳಿಂದ ಸಮಿತಿಯ ಬೆಳವಣಿಗೆಗೆ ಸಹಕರಿಸಿದ, ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ವಿಶ್ರಾಂತ ಪ್ರಾಚಾರ್ಯರಾದ ವಿ.ಬಿ. ಅತಿಕಜೆ ಹಾಗೂ ಪ್ರೊ.ಹರಿನಾರಾಯಣ ಮಾಡಾವು ಅವರಿಗೆ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅ.೧೮ ರಂದು ನ್ಯಾಯವಾದಿ ಸುಬ್ರಹ್ಮಣ್ಯ ಕೊಳತ್ತಾಯರವರ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಶಿವರಾಮ ಕಾರಂತರು ಇರುವಾಗ ಸುಬ್ರಹ್ಮಣ್ಯ ಕೊಳತ್ತಾಯರವರು ಕೆಲಸ ಮಾಡಿದ್ದಾರೆ. ಜೀವಿತದವರೆಗೆ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಆದುದರಿಂದ ಅವರ ಸಂಸ್ಮರಣೆ ನಡೆಯಲಿದೆ. ಅಲ್ಲದೆ ಪ್ರತೀದಿನ ಹೊಸ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೂಡಿಬರಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ದಸರಾ ನಾಡಹಬ್ಬ ಸಮಿತಿ ಕಾರ್ಯದರ್ಶಿ ಡಾ|ವಿಜಯ ಸರಸ್ವತಿ ಬಿ, ಜತೆ ಕಾರ್ಯದರ್ಶಿ ಶಂಕರಿ ಶರ್ಮ, ಸಮಿತಿ ಉಪಕಾರ್ಯದರ್ಶಿ ಈಶ್ವರಚಂದ್ರ ಡಿ.ಎನ್., ಉಪಾಧ್ಯಕ್ಷ ಮಣಿಲ ಮಹಾದೇವ ಶಾಸ್ತ್ರಿ ಉಪಸ್ಥಿತರಿದ್ದರು.

