ರಾಜ್ಯೋತ್ಸವ ನಿಮಿತ್ತ ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸುತ್ತಿದ್ದು, ಹೀಗಾಗಿ ನವೆಂಬರ್ 1ರಂದು ದೆಹಲಿಯಲ್ಲಿ ನಡೆಯಲಿರುವ ಎಸ್ ಐಆರ್ ವಿರುದ್ಧ ಬೃಹತ್ ಪ್ರತಿಭಟನೆಯಲ್ಲಿ ನಾನು ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.“ಪಕ್ಷದ ವತಿಯಿಂದ ರಾಜ್ಯದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ” ಎಂದರು

ಜಿಲ್ಲಾ ಸಚಿವರು ಜಿಲ್ಲೆಗಳಲ್ಲಿ ಧ್ವಜಾರೋಹಣ

ಜಿಲ್ಲಾ ಸಚಿವರುಗಳು ತಮ್ಮ ಜಿಲ್ಲೆಗಳಲ್ಲಿ ರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಮಾಡಲಿದ್ದು, ಶಾಸಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಅನಾರೋಗ್ಯದಿಂದಾಗಿ ವಿಶ್ರಾಂತಿಯ ಅಗತ್ಯವಿದ್ದು, ಅವರ ಬದಲಿಗೆ ಸಚಿವ ಕೃಷ್ಣ ಬೈರೇಗೌಡರು ಧ್ವಜಾರೋಹಣ ಮಾಡಲಿದ್ದಾರೆ’ ಎಂದು ವಿವರಿಸಿದರು.

ರಾಜ್ಯೋತ್ಸವ ಪ್ರಶಸ್ತಿಯನ್ನು ಇಂತಿಷ್ಟೇ ಮಂದಿಗೆ ಕೊಡಬೇಕು ಎಂದು ನಿಗದಿ ಮಾಡಲಾಗಿದೆಯೇ ಎಂದು ಕೇಳಿದಾಗ, “ನಾವು ಎಷ್ಟನೇ ವರ್ಷದ ರಾಜ್ಯೋತ್ಸವ ಆಚರಿಸುತ್ತಿರುತ್ತೇವೋ ಅಷ್ಟು ಜನರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಈ ಹಿಂದಿನಿಂದ ನಡೆದು ಬಂದಿರುವ ಸಂಪ್ರದಾಯ. ಅದನ್ನು ಈ ಬಾರಿಯೂ ಮುಂದುವರಿಸುತ್ತೇವೆ. ಈ ಸಲ ಕನ್ನಡಕ್ಕಾಗಿ ಹೋರಾಡಿದ ವಾಟಾಳ್ ನಾಗರಾಜ್ ಅವರ ಹೆಸರನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಗಿತ್ತು. ಅವರಿಗೆ ಈ ಪ್ರಶಸ್ತಿ ನೀಡಬೇಕು ಎನ್ನುವುದು ನನ್ನ ಆಸೆಯೂ ಆಗಿತ್ತು. ಆದರೆ, ವಾಟಾಳ್ ನಾಗರಾಜ್ ಅವರು ಈ ಹಿಂದಿನಂತೆ, ಈ ಬಾರಿಯೂ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನನ್ನ ಸಚಿವರು ನೀಡಿದ್ದಾರೆ” ಎಂದರು.

ಹಾಲಿನ ಬೆಲೆ ಏರಿಕೆಯಲ್ಲಿ 7 ರೂಪಾಯಿ ರೈತರಿಗೆ

“ಹಾಲಿನ ಬೆಲೆ 12 ರೂಪಾಯಿ ಹೆಚ್ಚಿಸುವ ಬೇಡಿಕೆ ಇತ್ತು. ಆದರೆ, ನಾವು 8 ರೂಪಾಯಿ ಹೆಚ್ಚಿಸಿದ್ದೇವೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಹಾಲಿನ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಮ್ಮ ಹಾಲು ನೆರೆ ರಾಜ್ಯಗಳಿಗೆ ಸರಬರಾಜಾಗುತ್ತಿತ್ತು. ವಿಧಾನಸಭೆ, ಪರಿಷತ್ ನಲ್ಲೂ ಕೂಡ ಹಾಲಿನ ಬೆಲೆ ಏರಿಕೆ ಕುರಿತಂತೆ ಚರ್ಚೆಯಾಗಿತ್ತು. ಏರಿಕೆಯಾಗಿರುವ ಮೊತ್ತದಲ್ಲಿ 1 ರೂಪಾಯಿ ಮಾತ್ರ ಒಕ್ಕೂಟಗಳ ನಿರ್ವಹಣೆಗಾಗಿ ನೀಡಲಾಗುತ್ತಿದ್ದು, ಉಳಿದ 7ರೂಪಾಯಿಯನ್ನು ರೈತರಿಗೆ ನೀಡುತ್ತಿದ್ದೇವೆ’ ಎಂದರು.

ಪ್ರತಿಪಕ್ಷಗಳು ಬೆಲೆ ಏರಿಕೆ ಸರ್ಕಾರ ಅಂತಿದ್ದಾರಲ್ಲಾ ಎಂಬ ಪ್ರಶ್ನೆಗೆ, “ಕೇಂದ್ರ ಸರ್ಕಾರ ಏನು ಮಾಡುತ್ತಿದೆಯೋ ಅದನ್ನೇ ನಾವು ಪಾಲನೆ ಮಾಡುತ್ತಿದ್ದೇವೆ” ಎಂದು ತಿರುಗೇಟು ನೀಡಿದರು.

*ಬೆಳೆ ಪರಿಹಾರಕ್ಕೆ ನಿಯಮಗಳು ಜಾಸ್ತಿ ಇವೆ ಎಂಬ ಚರ್ಚೆಯಾಗುತ್ತಿದೆ ಎಂದು‌‌ ಕೇಳಿದಾಗ, “ಬೆಳೆ ಪರಿಹಾರದ ವಿಚಾರವಾಗಿ ನಮ್ಮ ಕೈಯಲ್ಲಿ ಏನೇನು ಅವಕಾಶ ಇದೆಯೋ ಅದನ್ನು ಬಳಸಿ ರೈತರಿಗೆ ಸಹಾಯ ಮಾಡುತ್ತೇವೆ. ಕಬ್ಬಿನ ವಿಚಾರವಾಗಿ ಎಲ್ಲರೂ ಕೂತು ಏನೋ ಒಂದು ತೀರ್ಮಾನಕ್ಕೆ ಬಂದಿದ್ದೆವು. ಆದರೆ, ಕೇಂದ್ರ ಸರ್ಕಾರ ಆಶ್ವಾಸನೆ ಕೊಟ್ಟಿದೆ ಎಂದು ರೈತರು ಹೇಳಿದರು. ಕೇಂದ್ರ ಸರ್ಕಾರ ಏನೇ ತೀರ್ಮಾನ ಕೈಗೊಂಡರು ಅದನ್ನು ಪಾಲಿಸುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದರು. ಈ ಮಧ್ಯೆ ಅಸಮಾಧಾನ ಉಂಟಾಗಿದೆ ಎನ್ನುವ ಮಾಹಿತಿ ಬಂದಿದೆ. ನಾನು ಹೇಳುವುದು ಇಷ್ಟೇ. ಕೇಂದ್ರ ಸರ್ಕಾರ ಏನು ತೀರ್ಮಾನ ಮಾಡಿದರೂ ಅದಕ್ಕೆ ಬದ್ಧರಾಗೋಣ. ಎಲ್ಲರೂ ತಾಳ್ಮೆಯಿಂದ ಸಹಕಾರ ಕೊಡಿ. ನಾವು ಕೂಡ ರೈತರ ಪರವಾಗಿ ಇದ್ದೇವೆ” ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!