28 ಭಾಷೆಗಳಲ್ಲಿ 28 ಗಂಟೆಗಳ ನಿರಂತರ ಗಾಯನ: ಯಶವಂತ್‌ಗೆ ವಿಶ್ವದಾಖಲೆ

ಬೆಂಗಳೂರು: ಭಾರತದ ಏಕತೆ, ಅಖಂಡತೆ ಹಾಗೂ ಭಾಷಾ ವೈವಿಧ್ಯತೆಯನ್ನು ಸಾರುವ ಉದ್ದೇಶದಿಂದ 28 ರಾಜ್ಯಗಳ 28 ಭಾಷೆಗಳಲ್ಲಿ ನಿರಂತರ 28 ಗಂಟೆಗಳ ಕಾಲ ಗಾಯನ ಮಾಡುವ ಮೂಲಕ ಮೂಡುಬಿದಿರೆಯ ವಿದ್ವಾನ್ ಯಶವಂತ್ ಎಂ.ಜಿ. ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಬೆಂಗಳೂರಿನ ಡಾ. ರಾಜ್‌ಕುಮಾರ್ ಆಡಿಟೋರಿಯಂನಲ್ಲಿ ಅಕ್ಟೋಬರ್ 28ರಂದು ಮಧ್ಯಾಹ್ನ 1 ಗಂಟೆಗೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಯೊಂದಿಗೆ ಗಾಯನ ಆರಂಭಿಸಿದ ಅವರು, ಅಕ್ಟೋಬರ್ 29ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳಿಸಿದರು. ಕಳೆದ ವರ್ಷ ಮಂಗಳೂರಿನಲ್ಲಿ 24 ಗಂಟೆಗಳ ನಿರಂತರ ಗಾಯನದ ಮೂಲಕ ನಿರ್ಮಿಸಿದ್ದ ತಮ್ಮದೇ ದಾಖಲೆಯನ್ನು ಇದೀಗ 28 ಗಂಟೆಗಳ ಗಾಯನದ ಮೂಲಕ ಉತ್ತಮಪಡಿಸಿಕೊಂಡಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಷ್ಣೋಯಿ ಪ್ರಮಾಣಪತ್ರ ಹಸ್ತಾಂತರಿಸಿದರು. ಶಾಸಕರಾದ ಗೋಪಾಲಯ್ಯ, ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಗೀತಗಾರರ ತಂಡ ಹಿನ್ನೆಲೆ ಸಂಗೀತದಲ್ಲಿ ಸಹಕರಿಸಿತು. ನೂರಾರು ಸಂಗೀತಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕನ್ನಡದ ಗೀತೆಯೊಂದಿಗೆ ಆರಂಭವಾಗಿ ಅದೇ ಗೀತೆಯೊಂದಿಗೆ ಮುಕ್ತಾಯಗೊಂಡ ಗಾಯನ ಭಾಷಾಭಿಮಾನ ಹಾಗೂ ರಾಷ್ಟ್ರೀಯ ಏಕತೆಯ ಸಂದೇಶ ಸಾರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!