ಉಡುಪಿ: ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ ಮಣಿಪಾಲ 80 ಬಡಗಬೆಟ್ಟು ಗ್ರಾಮದ ರಾಜೀವನಗರದಲ್ಲಿ ನಡೆದಿದೆ.ಆಂಧ್ರಪ್ರದೇಶ ಮೂಲದ ಸೀತಾರಾಮ ರೆಡ್ಡಿ ತೌಟರೆಡ್ಡಿ (21) ಬಂಧಿತ ಆರೋಪಿ.
ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಮಣಿಪಾಲ ಪೊಲೀಸ್ ಉಪನಿರೀಕ್ಷಕಿ ಅಕ್ಷಯಕುಮಾರಿ ಎಸ್.ಎನ್. ಅವರ ನೇತೃತ್ವದ ಪೊಲೀಸರ ತಂಡವು ಅ.8ರಂದು ಸಂಜೆ 80 ಬಡಗಬೆಟ್ಟು ಗ್ರಾಮದ ರಾಜೀವನಗರದ ಮಾತಪಿತಾ ಮನೆಯಲ್ಲಿ ಆರೋಪಿಯನ್ನು ಬಂಧಿಸಿದೆ.
ಆರೋಪಿ ಮೇಘಾಲಯದಿಂದ ಆನ್‌ಲೈನ್ ಆಪ್ (ರೆಡಿಟ್) ಮುಖಾಂತರ ಗಾಂಜಾ ಖರೀದಿ ಮಾಡಿ ಅಂಚೆ ಮೂಲಕ ಉಡುಪಿ ಮತ್ತು ಮಣಿಪಾಲ ಪ್ರದೇಶಗಳಿಗೆ ತರಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಪರಿಚಯಸ್ತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದನು ಎಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ.
ಆರೋಪಿಯ ಮನೆಯಿಂದ ಡೈಪರ್‌ಗಳ ಮಧ್ಯದಲ್ಲಿ ಮರೆಮಾಡಿದ್ದ ಮೂರು ಪ್ಯಾಕ್‌ಗಳಲ್ಲಿ ಸುಮಾರು ಒಂದು ಕೆಜಿಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ಪೊಲೀಸರು ಆರೋಪಿಯ ವಶದಿಂದ ಗಾಂಜಾ, ಗಾಂಜಾ ಸೇದುವ ಎರಡು ಬಾಂಗ್‌ಗಳು, ಒಂದು ಐಫೋನ್, ನಗದು ರೂ. 3,180 ಸೇರಿ ಒಟ್ಟು ಸುಮಾರು ರೂ. 1,35,000/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.