ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ಬಗ್ಗೆ ದೈವಾರಾಧಕ ತಮ್ಮಣ್ಣ ಶೆಟ್ಟಿ ಏನಂದ್ರು

ಮಂಗಳೂರು :ರಿಷಬ್ ಶೆಟ್ಟಿ ತೊಡೆಯ ಮೇಲೆ ದೈವ ಮಲಗಿದ ಸಂಗತಿ ತೀವ್ರ ವಿವಾದಕ್ಕೆ ಈಡಾಗಿದೆ. ಹರಕೆ ನೇಮದ ನೆಪದಲ್ಲಿ ದೈವ ನರ್ತಕರು ಅತಿರೇಕದ ವರ್ತನೆ ತೋರಿದ್ದಾರೆ ಎಂದು ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಈ ನಡುವೆ ಹರಕೆ ನೇಮ ಎಂಬುದೇ ಇಲ್ಲ ಎಂದು ತಮ್ಮಣ್ಣ ಶೆಟ್ಟಿ ಹೇಳುತ್ತಿರುವುದು ವಿವಾದವನ್ನು ಹೊಸ ಮಗ್ಗುಲಿಗೆ ಕೊಂಡೊಯ್ದಿದೆ. ಜನ ..ಗೊತ್ತಿಲ್ಲ ಶಿವನೇ .. ಎನ್ನುವಂತಾಗಿದೆ.

ಕಾಂತಾರ ಚಿತ್ರದ ಮೂಲಕ ದೈವಾರಾಧನೆಯನ್ನು ಮಾರ್ಕೆಟ್ ಮಾಡುತ್ತಿದ್ದಾರೆಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತೀವ್ರ ಟೀಕೆ ಕೇಳಿಬಂದಿತ್ತು. ಚಿತ್ರದ ಯಶಸ್ಸಿನ ಕಾರಣಕ್ಕೆ ವಾರದ ಹಿಂದೆ ಚಿತ್ರ ತಂಡವು ಮಂಗಳೂರಿನಲ್ಲಿ ವಾರಾಹಿ ಪಂಜುರ್ಲಿ ದೈವಕ್ಕೆ ಹರಕೆ ನೇಮವನ್ನು ಅರ್ಪಿಸಿತ್ತು. ಈ ವೇಳೆ, ದೈವದ ಪಾತ್ರಧಾರಿಯ ವರ್ತನೆ, ರಿಷಬ್ ಶೆಟ್ಟಿಯನ್ನು ಹಾರೈಸಿದ ಪರಿಯ ಬಗ್ಗೆ ಮತ್ತೆ ಟೀಕೆ, ಟಿಪ್ಪಣಿ ಕೇಳಿಬಂದಿದೆ.

ಕಾಂತಾರ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಸಮಸ್ಯೆಗಳು ಎದುರಾದಾಗ ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ದೈವಸ್ಥಾನದ ವಾರ್ಷಿಕ ಉತ್ಸವಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ ಹರಕೆ ನೇಮ ಅರ್ಪಿಸುವ ಬಗ್ಗೆ ಹೇಳಿಕೊಂಡಿದ್ದರು.
ಕಾಂತಾರ ಚಿತ್ರೀಕರಣ ಪೂರೈಸಿ ಚಿತ್ರ ಬಿಡುಗಡೆಗೊಂಡು ಭಾರೀ ಯಶಸ್ಸನ್ನೂ ಪಡೆದಿತ್ತು. ಇತ್ತೀಚೆಗೆ ಬಾರೆಬೈಲ್ ದೈವಸ್ಥಾನದಲ್ಲಿ ಇಡೀ ಚಿತ್ರ ತಂಡವೇ ಆಗಮಿಸಿ ದೈವಕ್ಕೆ ಹರಕೆ ನೇಮ ಅರ್ಪಿಸಿತ್ತು.

ಈ ವೇಳೆ, ದೈವದ ಪಾತ್ರಧಾರಿಯಾಗಿದ್ದ ಮುಕೇಶ್ ಗಂಧಕಾಡು ಅವರು ನಟ ರಿಷಬ್ ಶೆಟ್ಟಿ ಕುಳಿತುಕೊಂಡಿದ್ದ ಜಾಗಕ್ಕೆ ತೆರಳಿ ತೊಡೆಯಲ್ಲಿ ಮಲಗಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು, ದೈವಾರಾಧಕರು ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೈವದ ಸಹಜ ವೇಷವಿಲ್ಲದೆ ಸೊಂಟಕ್ಕೆ ಕೆಂಪು ಬಟ್ಟೆ ಮತ್ತು ಬರಿ ಮೈಯಲ್ಲಿ ನರ್ತಿಸುತ್ತ ಪಲ್ಟಿ ಹೊಡೆದಿರುವುದೂ ಸರಿಯಲ್ಲ ಎಂದು ದೈವ ನರ್ತಕನ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ದೈವಾರಾಧಕ ತಮ್ಮಣ್ಣ ಶೆಟ್ಟಿ, ರಿಷಬ್ ಶೆಟ್ಟಿ ಕುಂದಾಪುರದವರಾಗಿದ್ದು ತುಳುನಾಡಿನ ದೈವಾರಾಧನೆ ಬಗ್ಗೆ ತಿಳಿದಿರಲಿಕ್ಕಿಲ್ಲ. ಆದರೆ ದೈವದ ಆರಾಧನೆ ಮಾಡುವವರು ಈ ರೀತಿ ತಪ್ಪು ಮಾಡಬಾರದಿತ್ತು. ರಾಜನ್ ದೈವ ಪಂಜುರ್ಲಿ ಹೇಗಿರಬೇಕೋ ಹಾಗೆಯೇ ಇರಬೇಕು, ಬರಿಮೈಯಲ್ಲಿ ನರ್ತಿಸುವುದು, ಪಲ್ಟಿ ಹೊಡೆಯುವುದೆಲ್ಲ ಪಂಜುರ್ಲಿ ಕೋಲದಲ್ಲಿ ಇಲ್ಲ. ದೈವಾರಾಧನೆ ಕರಾವಳಿ ಜನರ ಆರಾಧನಾ ಕಲೆಯಾಗಿದ್ದು, ಇದನ್ನು ಮಾರ್ಕೆಟ್ ಮಾಡಬೇಕಿಲ್ಲ. ಅದರ ನೆಪದಲ್ಲಿ ರಿಷಬ್ ಶೆಟ್ಟಿ ಬಿಸಿನೆಸ್ ಮಾಡುವುದೂ ಬೇಕಿಲ್ಲ ಎಂದಿದ್ದಾರೆ.

ಇದಲ್ಲದೆ, ರಾಜನ್ ದೈವಗಳಿಗೆ ಹರಕೆ ನೇಮ ಎನ್ನುವುದೇ ಇಲ್ಲ. ರಿಷಬ್ ಶೆಟ್ಟಿ ಹೆಸರಲ್ಲಿ ಹರಕೆ ನೇಮ ಮಾಡಿದ್ದೇ ತಪ್ಪು. ಇದಕ್ಕೆಲ್ಲ ದೈವವೇ ಉತ್ತರ ನೀಡಬೇಕು. ರಾಜನ್ ದೈವಗಳಿಗೆ ವಾರ್ಷಿಕ ಉತ್ಸವ ಬಿಟ್ಟರೆ ಗುತ್ತಿನವರು ಧರ್ಮನೇಮ ಎಂದಷ್ಟೇ ಮಾಡುವುದು ವಾಡಿಕೆ. ಇನ್ಯಾರೋ ಬಂದು ಹರಕೆ ನೇಮ ಮಾಡುವ ಸಂಪ್ರದಾಯ ಇಲ್ಲ. ರಿಷಬ್ ಶೆಟ್ಟಿ ಬೇಕಾದರೆ ತನ್ನ ಮನೆಯಲ್ಲಿ ದೈವಾರಾಧನೆ ಇದ್ದರೆ ಅವುಗಳಿಗೆ ಕೋಲ ಕೊಟ್ಟು ಹರಕೆ ತೀರಿಸಲಿ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ.

ಜಾಲತಾಣದಲ್ಲಿ ರಿಷಬ್ ಶೆಟ್ಟಿ ತೊಡೆಯ ಮೇಲೆ ಮಲಗಿದ ವರ್ತನೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದ್ದು, ಅದು ದೈವ ಮಲಗಿದ್ದಲ್ಲ, ದೈವ ನರ್ತಕ ಎಂದು ಟೀಕಿಸಲಾಗುತ್ತಿದೆ. ಕಾಂತಾರ ಚಿತ್ರದಲ್ಲಿ ಇದು ದೈವ ಆಡಿದ್ದೋ, ದೈವ ನರ್ತಕನ ಮಾತಾಡಿದ್ದೋ ಎನ್ನುವ ರೀತಿಯ ಡೈಲಾಗ್ ಇತ್ತು. ಅದೇ ರೀತಿಯಲ್ಲಿ ಇದು ದೈವ ನರ್ತಕನ ಕಿತಾಪತಿ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಕಾಲೆಳೆಯಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!