ಮಂಗಳೂರು: ಇಂದಿನ ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಶಿಕ್ಷಣ ಮಾತ್ರವಲ್ಲದೆ ಪ್ರಾಯೋಗಿಕ ಜ್ಞಾನವೂ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಉದ್ದೇಶದಿಂದ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸಿಯೆರಾ ಲರ್ನಿಂಗ್ ಅಕಾಡೆಮಿ ಸಹಯೋಗದೊಂದಿಗೆ ‘ಇಂಡಸ್ಟ್ರಿ ಎಂಬೆಡೆಡ್ ಪ್ರೋಗ್ರಾಂ’ (IEP) ಮಾದರಿಯ ನೂತನ ಪದವಿ ಕೋರ್ಸ್ಗಳನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಈ ಕೋರ್ಸ್ಗಳು ಜೂನ್ ತಿಂಗಳಿಂದ ಆರಂಭವಾಗಲಿವೆ ಎಂದು ಸಿಯೆರಾ ಲರ್ನಿಂಗ್ ಅಕಾಡೆಮಿ ಮುಖ್ಯಸ್ಥ ದೀಪಿತ್ ಕುಂದರ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಅಂತಿಮ ಹಂತದಲ್ಲಿ ಅಥವಾ ಶಿಕ್ಷಣ ಮುಗಿದ ನಂತರ ಇಂಟರ್ನ್ಶಿಪ್ಗಾಗಿ ಹುಡುಕಾಟ ನಡೆಸುತ್ತಾರೆ. ಆದರೆ ಈ ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಮೊದಲ ಸೆಮಿಸ್ಟರ್ನಿಂದಲೇ ಉದ್ಯಮ ಕ್ಷೇತ್ರದ ನೇರ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈ ಮಾದರಿಯ ಶಿಕ್ಷಣವು ಕೇವಲ ಸೈದ್ಧಾಂತಿಕ ಪಾಠಗಳಿಗೆ ಸೀಮಿತವಾಗದೆ ‘ಮಾಡುತ್ತಾ ಕಲಿಯುವ’ (Learn by Doing) ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ವಿದ್ಯಾರ್ಥಿಗಳು ಆರಂಭದಿಂದಲೇ ಉದ್ಯಮ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನೈಜ ಅನುಭವ ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಸದ್ಯಕ್ಕೆ ಈ ಕಾರ್ಯಕ್ರಮದ ಅಡಿಯಲ್ಲಿ ಎರಡು ಪ್ರಮುಖ ಪದವಿ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಸಾಫ್ಟ್ವೇರ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ‘BCA in AI–Augmented Software Systems’ ಹಾಗೂ ಮಾಧ್ಯಮ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವವರಿಗಾಗಿ ‘BSc in Media and Creative Technologies’ ಕೋರ್ಸ್ಗಳನ್ನು ರೂಪಿಸಲಾಗಿದೆ.
ಈ ಎರಡೂ ಕೋರ್ಸ್ಗಳು ಇಂದಿನ ಉದ್ಯಮ ಕ್ಷೇತ್ರದ ಬೇಡಿಕೆಗೆ ಅನುಗುಣವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ‘ಪೇಯ್ಡ್ ಇಂಟರ್ನ್ಶಿಪ್’ ವ್ಯವಸ್ಥೆ ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳು ಮೊದಲ ಸೆಮಿಸ್ಟರ್ನಿಂದಲೇ ಲೈವ್ ಪ್ರಾಜೆಕ್ಟ್ಗಳಲ್ಲಿ ಪಾಲ್ಗೊಂಡು ಸ್ಟೈಪೆಂಡ್ ಪಡೆಯುವ ಅವಕಾಶ ಹೊಂದಲಿದ್ದಾರೆ. ಮೂರನೇ ವರ್ಷದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ಉದ್ಯಮಗಳಲ್ಲಿ ಪೂರ್ಣಕಾಲಿಕವಾಗಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದ್ದು, ಇದರಿಂದ ಪದವಿ ಪೂರ್ಣಗೊಳ್ಳುವ ಹೊತ್ತಿಗೆ ಅವರಿಗೆ ಒಂದು ವರ್ಷದ ನೈಜ ಉದ್ಯೋಗ ಅನುಭವ ಸಿಗಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಲವಿಟಾ, ಪಿಆರ್ಓ ಫಾ. ಮೆಲ್ವಿನ್, ಪಿಆರ್ಓ ಚಂದ್ರಕಲಾ, ಟೆಕ್ನಿಕಲ್ ಅಡ್ವೈಸರ್ ಮನು ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ರಿಷಲ್ ಉಪಸ್ಥಿತರಿದ್ದರು.