ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ಸುಮಾರು ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಫರಾಜ್ @ ಮೊಹಮ್ಮದ್ ಫರಾಜ್, ಬಂಧಿತ ಯುವಕ. ಈತನ ವಿರುದ್ಧ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆಯತ್ನ, ಮಾದಕ ವಸ್ತು ಮಾರಾಟ, ಕಳವು ಹಾಗೂ ಕಾರಾಗೃಹದಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಗಳು ಸೇರಿ ಒಟ್ಟು ಸುಮಾರು 10 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ವಿಚಾರಣೆಗೆ ಹಾಜರಾಗದೆ ಈತನು ತಲೆಮರೆಸಿಕೊಂಡಿದ್ದನು.
ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ದರೋಡೆ, ಹಲ್ಲೆ, ಕಳವು ಸೇರಿದಂತೆ 04 ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ ಮತ್ತು ಕಳವು ಸಂಬಂಧಿತ 02 ಪ್ರಕರಣಗಳು, ಉತ್ತರ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಬೆದರಿಕೆ, ಅಪಹರಣ ಹಾಗೂ ದರೋಡೆಗೆ ಸಂಬಂಧಿಸಿದ 02 ಪ್ರಕರಣಗಳು ದಾಖಲಾಗಿವೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಯತ್ನ ನಡೆಸಿದ 01 ಪ್ರಕರಣ ಹಾಗೂ ಉರ್ವ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿದ 01 ಪ್ರಕರಣ ದಾಖಲಾಗಿವೆ. ಈತನು ಉಳ್ಳಾಲ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಪ್ರಸ್ತುತ ಈತನ ವಿರುದ್ಧ 06 ವಾರಂಟ್ಗಳು ಹಾಗೂ 01 ಪ್ರೊಕ್ಲಮೇಶನ್ ಜಾರಿಯಲ್ಲಿದೆ. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.