ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಕುಂದರ್ ಕುಟುಂಬ ದೈವಸ್ಥಾನ ಚಾವಡಿ ಸಮಿತಿ ವತಿಯಿಂದ ಅಳಪೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಡೀಲಿನ ಕುಂದರ್ ಕುಟುಂಬದ ದೈವಸ್ಥಾನಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಬಹಳ ಕಿರಿದಾಗಿದ್ದು, ಅಭಿವೃದ್ಧಿ ಕಾಮಗಾರಿಯ ಅಗತ್ಯತೆ ಬಹಳ ದಿನಗಳಿಂದ ಇದ್ದುದಾಗಿ ಹೇಳಿದರು. ಇಂದು ಶಿಲಾನ್ಯಾಸಗೊಂಡಿರುವ ಈ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ವರ್ಷ ಇಲ್ಲಿ ಸಂಕ್ರಮಣ ಸೇರಿದಂತೆ ಜಾತ್ರಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಭಕ್ತರು ಮತ್ತು ಸ್ಥಳೀಯ ನಾಗರಿಕರಿಗೆ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರು ಸಹಕಾರ ನೀಡಿದರೆ ರಸ್ತೆ ಅಗಲೀಕರಣ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು. ಇದರಿಂದ ತುರ್ತು ಸಂದರ್ಭಗಳಲ್ಲಿ ಹಾಗೂ ದೈನಂದಿನ ಬಳಕೆಗೆ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ನಿಕಟಪೂರ್ವ ಪಾಲಿಕೆ ಸದಸ್ಯೆ ಶೋಭಾ ಪೂಜಾರಿ, ವಾರ್ಡ್ ಅಧ್ಯಕ್ಷ ಹರೀಶ್ ಹಾಗೂ ಪ್ರಮುಖರಾದ ಸುಕೇಶ್, ವೀರೇಂದ್ರ, ಮೀನಕ್ಕ, ಜಯಂತ್, ಸುನಿಲ್, ಸತೀಶ್ ಸೇರಿದಂತೆ ಕುಂದರ್ ಕುಟುಂಬಸ್ಥರು ಉಪಸ್ಥಿತರಿದ್ದರು.