ಮಂಗಳೂರು: ನಗರದಲ್ಲಿ 2025ರಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಗೆ ಕಾರಣವಾಗುವಂತಹ ಪೋಸ್ಟ್‌ಗಳನ್ನು ಹಂಚಿಕೊಂಡ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಕಂಕನಾಡಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 179/2025ರಂತೆ ಬಿ.ಎನ್.ಎಸ್. 2023ರ ಕಲಂ 353(1), 353(2), 61(2), 55 ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು.
ತನಿಖೆ ವೇಳೆ ‘TN-MADDY’ ಎಂಬ ಸಾಮಾಜಿಕ ಜಾಲತಾಣ ಖಾತೆಯಿಂದ ಕೋಮು ಪ್ರಚೋದಕ ವಿಷಯಗಳನ್ನು ಹಂಚಿಕೊಳ್ಳಲಾಗಿರುವುದು ಪತ್ತೆಯಾಗಿದೆ. ಈ ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪವನ್ ಆಚಾರ್ಯ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಇದಲ್ಲದೆ, ಇದೇ ಆರೋಪಿತನು ತನ್ನ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಕೋಮು ಪ್ರಚೋದನೆ ಮಾಡಿದ ಆರೋಪದಲ್ಲಿ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿಯೂ ಅ.ಕ್ರ. 95/2025ರಂತೆ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅದರ ತನಿಖೆಯೂ ಮುಂದುವರಿದಿದೆ.