ಮಂಗಳೂರು:ಕಳವಾರು ಪೇಜಾವರ ಸಂತ ಜೋಸೆಫರ ದೇವಾಲಯದಲ್ಲಿ ಎರಡೂವರೆ ಶತಮಾನಗಳ ಹಿಂದೆ ಆರಂಭವಾದ ಯೇಸು ಕ್ರಿಸ್ತರ ಬದುಕಿನ ಕೊನೆಯ ದಿನದ ಕಷ್ಟಮತ್ತು ಯಾತನೆಯ ಕ್ಷಣಗಳನ್ನು ಸ್ಮರಿಸುವ ಶಿಲುಬೆಯ ಯಾತ್ರೆ ಈ ಬಾರಿ ಮಾ.31ರಂದು ನಡೆಯಲಿದೆ ಎಂದು ಪೇಜಾರ್ ವಲಯದ ಪ್ರಧಾನ ಧರ್ಮಗುರು ವಂ| ಫಾ| ರೂಡಾಲ್ಫ್ ರವಿ ಡೇಸಾ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಿರಂತರ ಪ್ರಾರ್ಥನೆ, ಸ್ತುತಿ ಆರಾಧನೆ ಹಾಗೂ ದೇವರ ವಾಕ್ಯದ ಮನನ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾರಿಸ್ಮಾಟಿಕ್ ಸಂಚಾಲನ ಈ ಕಾರ್ಯಕ್ರಮ ನಡೆಸಿಕೊಡಲಿದ್ದು, 3 ಗಂಟೆಗೆ ಭಕ್ತಿ ಆಚರಣೆ, 3.30ಕ್ಕೆ ಪವಿತ್ರ ಪ್ರಸಾದದ ಆರಾಧನೆ ನಡೆಲಿದೆ. ಸಂಚಾಲನದ ನಿರ್ದೇಶಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಕಾರ್ಯ ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಪವಿತ್ರ ಬಲಿಪೂಜೆ ಹಾಗೂ 6 ಗಂಟೆಗೆ ಶಿಲುಬೆಯ ಹಾದಿ ಬಳಿಕ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಫಾ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 9 ಗಂಟೆಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ. ಮಧ್ಯಾಹ್ನ 2.45ಕ್ಕೆ ಬಜಪೆ ಚೆಕ್ ಪೋಸ್ಟ್‌ನಿಂದ ಹಾಗೂ 3.30ಕ್ಕೆ ಜೋಕಟ್ಟೆ ಕೆಬಿಎಸ್‌ನಿಂದ ಕಳವಾರು ಚರ್ಚ್ ಗೆ ಪಾದಯಾತ್ರೆ ನಡೆಯಲಿದೆ ಎಂದರು.
ಪೇಜಾರ್ ಚರ್ಚಿನ ಪ್ರಧಾನ ಧರ್ಮಗುರು ಫಾ| ರೊನಾಲ್ಡ್ ಡಿ‘ಸೋಜಾ , ಚರ್ಚ್ ನ ಪಾಲನಾ ಸಮಿತಿ ಉಪಾಧ್ಯಕ್ಷ ಕ್ಲಿಂಟನ್ ಡಿ‘ಸೋಜಾ, ಕಾರ್ಯದರ್ಶಿ ಸಿಲ್ವಿಯಾ ಪೇರಿಸ್, ಪ್ರಮುಖರಾದ ವಾಲ್ಟರ್ ಮೊಂತೆರೋ, ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು