ಫಲ್ಗುಣಿ ನದಿ ಕಲುಷಿತಕ್ಕೆ ಕೈಗಾರಿಕೆ ಕಾರಣವಲ್ಲ: ಕೆನರಾ ಕೈಗಾರಿಕ ಸಂಘ ಸ್ಪಷ್ಟನೆ

ಮಂಗಳೂರು:ಫಲ್ಗುಣಿ ನದಿ ನೀರು ಕಲುಷಿತಗೊಳ್ಳಲು ಕೈಗಾರಿಕೆಗಳು ಕಾರಣ ಎನ್ನುವ ಆರೋಪವನ್ನು ಕೆನರಾ ಕೈಗಾರಿಕ ಸಂಘ ತಳ್ಳಿ ಹಾಕಿದ್ದು, ಕೈಗಾರಿಕ ಪ್ರದೇಶದ ಹಾಗೂ ಪಕ್ಕದ ಪುನರ್ವಸತಿ ಪ್ರದೇಶದಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನದಿ ಸೇರುತ್ತಿದೆ ಹೊರತು ಕೈಗಾರಿಕೆಗಳ ಸಂಸ್ಕರಿಸದ ತ್ಯಾಜ್ಯ ನೀರು ಅಲ್ಲ ಎಂದು ಕೈಗಾರಿಕ ಪ್ರತಿನಿಧಿಗಳು ತಿಳಿಸಿದ್ದಾರೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆನರಾ ಕೈಗಾರಿಕ ಸಂಘದ ಉಪಾಧ್ಯಕ್ಷ ಬಿ.ಎ. ಇಕ್ಬಾಲ್ ಅವರು, ಕೈಗಾರಿಕ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿದೆ. ಆದರೆ ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಮಾತ್ರವಲ್ಲದೆ ಅನುಷ್ಠಾನ ಆಗಿರುವಲ್ಲಿ ಅದರ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ಜತೆಗೆ ತೋಕೂರು, ಕುಡುಂಬೂರು, ಅಂಗರಗುಂಡಿ ಪುನರ್ವಸತಿ ಪ್ರದೇಶದಲ್ಲಿಯೂ ಒಳಚರಂಡಿ ಜಾಲ ಇಲ್ಲ. ಇದರಿಂದಾಗಿ ಕೊಳಚೆ ನೀರು ಹರಿದು ಕಾಲುವೆಗಳ ಮೂಲಕ ನದಿ ಸೇರುತ್ತಿದೆ. ಹೊರತು ಕೈಗಾರಿಕೆಗಳ ಸಂಸ್ಕರಿಸದ ತ್ಯಾಜ್ಯ ನೀರು ಅಲ್ಲ ಎಂದರು.

ಪ್ರತಿಯೊಂದು ಕೈಗಾರಿಕೆಗಳು ತಮ್ಮದೇ ಆದ ತ್ಯಾಜ್ಯ ನೀರು ಸಂಸ್ಕರಣ ಘಟಕ (ಇಟಿಪಿ)ಗಳನ್ನು ಹೊಂದಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದ ಪ್ರಕಾರ ಇಟಿಪಿ ಗಳ ಮೂಲಕ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೂ ಆಗಿಂದಾಗಿ ಇದನ್ನು ಪರಿಶೀಲನೆ ನಡೆಸುತ್ತಾರೆ. ಇದನ್ನು ಪರಿಶೀಲಿಸಲೂ ಅವಕಾಶವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂಆರ್ ಪಿಎಲ್ ಸಂಸ್ಥೆಯ ಪ್ರತಿನಿಧಿ ಸುದರ್ಶನ್, ಬಿಎಎಸ್ ಎಫ್ ನ ಸಂತೋಷ್ ಪೈ, ಸೋಲಾರ್ ಸಂಸ್ಥೆಯ ಜಗದೀಶ್ , ಅದಾನಿ ವಿಲ್ಮಾರ್ ನ ಶಾಂತ ಕುಮಾರ್, ಪತಂಜಲಿ ಸಂಸ್ಥೆಯ ಹರೀಶ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!