ಗ್ಯಾಸ್ ಕೊರತೆ–ಬೆಲೆ ಏರಿಕೆ ಸಂಕಷ್ಟ: ರಿಕ್ಷಾ ಚಾಲಕರಿಗೆ ಪರಿಹಾರಕ್ಕೆ ಎಸ್‌ಡಿಟಿಯು ಒತ್ತಾಯ

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗ್ಯಾಸ್ ಕೊರತೆ ಮತ್ತು ಬೆಲೆ ಏರಿಕೆಯಿಂದ ರಿಕ್ಷಾ ಚಾಲಕರು ಸೇರಿದಂತೆ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮೊಕ್ರಾಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಒತ್ತಾಯಿಸಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಟಿಯು ಜಿಲ್ಲಾ ಮಂಗಳೂರು ನಗರ ಅಧ್ಯಕ್ಷ ರಹಿಮಾನ್ ಬೋಳಿಯಾರ್, ಆಟೋ ಗ್ಯಾಸ್ ಕೊರತೆಯ ಜೊತೆಗೆ ಬೆಲೆ ಏರಿಕೆಯಿಂದ ದುಡಿಯುವ ವರ್ಗದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಹೇಳಿದರು.

ಅಧಿಕೃತ ಸುತ್ತೋಲೆಯನ್ನು ಮೀರಿ ಕೆಲವು ಗ್ಯಾಸ್ ಪಂಪ್‌ಗಳು ಮನಬಂದಂತೆ ಬೆಲೆ ಏರಿಕೆ ಮಾಡಿ ಚಾಲಕರಿಂದ ಸುಲಿಗೆ ಮಾಡುತ್ತಿರುವುದಾಗಿ ಆರೋಪಿಸಿದ ಅವರು, ಗೃಹಬಳಕೆ ಮತ್ತು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳೂ ಹೆಚ್ಚಿದ ಬೆಲೆಗೆ ಮಾರಾಟವಾಗುತ್ತಿರುವುದಾಗಿ ತಿಳಿಸಿದರು.

ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದ ಉಂಟಾಗಿರುವ ಕಚ್ಚಾ ತೈಲ ವ್ಯತ್ಯಯದ ಹಿನ್ನೆಲೆಯಲ್ಲಿ ಸರ್ಕಾರ ತೆರಿಗೆ ಕಡಿತಗೊಳಿಸಿ ಗ್ಯಾಸ್ ದರವನ್ನು ನಿಯಂತ್ರಿಸಬೇಕು ಹಾಗೂ ಅನಿಲ ಸಿಲಿಂಡರ್‌ಗಳ ಸಮರ್ಪಕ ಸರಬರಾಜು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.

ಗ್ಯಾಸ್ ದರ ಏರಿಕೆಯಿಂದ ಆಟೋ ರಿಕ್ಷಾ ಚಾಲಕರ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಸರ್ಕಾರ ಸಾಮಾಜಿಕ ಹೊಣೆಗಾರಿಕೆಯಡಿ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷ ಸಲೀಂ ಜಿ.ಕೆ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಆಲಾಡಿ, ಜಿಲ್ಲಾ ಉಪಾಧ್ಯಕ್ಷ ಫಿಲಿಫ್ ಹೆನ್ರಿ ಡಿಸೋಜಾ, ಮುಲಿ ಘಟಕದ ಅಧ್ಯಕ್ಷ ವಿಶು ಕುಮಾರ್ ಹಾಗೂ ಇಲ್ಯಾಸ್ ಬೆಂಗ್ರೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!