ಮಂಜೇಶ್ವರ: ಕೂಳೂರು ಕೋಡಿಮಾರ್ ರಸ್ತೆಯಲ್ಲಿ ಅನಾಮಿಕರು ಡ್ರೈನೇಜ್ ನೀರನ್ನು ರಸ್ತೆಗೆ ಚೆಲ್ಲಿದ ಪರಿಣಾಮ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.
ಕೂಳೂರಿನ ಕೋಡಿಮಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೆಲವು ದಿನಗಳಿಂದ ಇದೇ ರೀತಿಯ ಕೃತ್ಯಗಳು ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಡ್ರೈನೇಜ್ ನೀರನ್ನು ವಾಹನದ ಮೂಲಕ ತಂದು ರಸ್ತೆಗೆ ಸುರಿದ ಪರಿಣಾಮ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ.
ಅಶುಚಿ ವಾತಾವರಣದಿಂದ ದುರ್ವಾಸನೆ ಉಂಟಾಗಿ ಆರೋಗ್ಯ ಸಮಸ್ಯೆಗಳ ಭೀತಿ ವ್ಯಕ್ತವಾಗಿದೆ. ರಸ್ತೆಯಲ್ಲಿ ಸಂಚಾರವೂ ಕಷ್ಟಕರವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಾರ್ಡ್ ಸದಸ್ಯೆ ಶರ್ಮಿಳಾ ಶೆಟ್ಟಿ ಅವರು ವಾಟ್ಸ್ಆಪ್ ಮೂಲಕ ವಿಡಿಯೋಗಳನ್ನು ಹಂಚಿಕೊಂಡು, ಈ ಕೃತ್ಯ ನಡೆಸುತ್ತಿರುವವರನ್ನು ಪತ್ತೆಹಚ್ಚಲು ಸಹಕರಿಸುವಂತೆ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಜೊತೆಗೆ, ಆ ಪ್ರದೇಶದಲ್ಲಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ.
ಈ ದುಷ್ಕೃತ್ಯವನ್ನು ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.