ಅಡ್ಯಾರ್‌ನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮಿಫ್ಸೆ ಮಿನ್ನರ್ವ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಸಂಯೋಜಿತ ಕೋರ್ಸ್‌ಗಳ ಲೋಕಾರ್ಪಣೆ ಸಮಾರಂಭವು ಇಂದು ವಿಜೃಂಭಣೆಯಿಂದ ನಡೆಯಿತು. ಬೆಳಗಾವಿಯ ವಿ.ಟಿ.ಯು ಅಧಿಕೃತ ಸಂಯೋಜನೆಗೆ ಕಾಲೇಜು ಒಳಪಟ್ಟಿರುವುದು ಈ ಸಂಸ್ಥೆಗೆ ಮಹತ್ವದ ಶೈಕ್ಷಣಿಕ ಮೈಲಿಗಲ್ಲಾಗಿದ್ದು, ಗಣ್ಯರ ಸಮ್ಮುಖದಲ್ಲಿ ಅದನ್ನು ಸಂಭ್ರಮಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ವಿದ್ಯಾರ್ಥಿಗಳು ಕೇವಲ ಪದವಿಗಾಗಿ ಓದದೆ, ಜೀವನದಲ್ಲಿ ನೆರವಾಗುವ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಅನೇಕರು ಉದ್ಯೋಗವಿಲ್ಲದೆ ಅಲೆದಾಡುತ್ತಿರುವ ಸಂದರ್ಭದಲ್ಲಿ, ಐಟಿಐ ಹಾಗೂ ವೃತ್ತಿಪರ ಶಿಕ್ಷಣ ಪಡೆದವರಿಗೆ ತಕ್ಷಣ ಉದ್ಯೋಗ ಲಭ್ಯವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಂಪೆನಿಗಳಿಗೆ ನಿಪುಣತೆ ಹೊಂದಿದ ವಿದ್ಯಾರ್ಥಿಗಳ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಖಾದರ್ ಹೇಳಿದರು.
ಸಂಸ್ಥೆಯ ಬೆಳವಣಿಗೆಯನ್ನು ಶ್ಲಾಘಿಸಿದ ಅವರು, ವಿನೋದ್ ಕೆ. ಜಾನ್ ಅವರು ಸುಮಾರು 19 ವರ್ಷಗಳ ಹಿಂದೆ ದೂರದೃಷ್ಟಿಯಿಂದ ಈ ಕಾಲೇಜು ಸ್ಥಾಪಿಸಿದ್ದು, ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಬಡತನ ನಿವಾರಣೆಗೆ ಶಿಕ್ಷಣವೇ ಮಾರ್ಗವಾಗಿದ್ದು, ವಿದ್ಯಾರ್ಥಿಗಳಿಗೆ ಸ್ವಾಭಿಮಾನದಿಂದ ಬದುಕುವಂತೆ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಭಾಷಾ ಪ್ರೌಢಿಮೆಯ ಮಹತ್ವವನ್ನು ಒತ್ತಿಹೇಳಿದ ಅವರು, ವಿದ್ಯಾರ್ಥಿಗಳು ಕೇವಲ ಇಂಗ್ಲಿಷ್ ಮೇಲೆ ಅವಲಂಬಿಸದೆ ಸ್ಥಳೀಯ ಭಾಷೆಗಳನ್ನೂ ಕಲಿಯಬೇಕು ಎಂದು ಕಿವಿಮಾತು ಹೇಳಿದರು. ಭಾಷಾ ಜ್ಞಾನವು ವ್ಯಕ್ತಿಗೆ ಜಾಗತಿಕ ಮಟ್ಟದಲ್ಲಿ ಯಶಸ್ಸು ತಂದುಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿ.ಟಿ.ಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಗೌರವ ಅತಿಥಿಯಾಗಿ ಭಾಗವಹಿಸಿ ಶುಭಾಶಯ ಕೋರಿದರು. ಮಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ, ಕೆ.ಪಿ.ಟಿ ಪ್ರಾಂಶುಪಾಲ ಪ್ರೊ. ಹರೀಶ ಶೆಟ್ಟಿ ಹಾಗೂ ಕೆ.ಎಸ್.ಒ.ಯು ಮೈಸೂರು ಮಾಜಿ ಶೈಕ್ಷಣಿಕ ಡೀನ್ ಪ್ರೊ. ಜಗದೀಶ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ವಿನೋದ್ ಕೆ. ಜಾನ್ ಅತಿಥಿಗಳನ್ನು ಸ್ವಾಗತಿಸಿದರು. ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಪಿ.ವಿ., ಪ್ರಾಂಶುಪಾಲ ಯಶವಂತ್ ಗೋಪಾಲ್ ಶೆಟ್ಟಿ ಹಾಗೂ ಟ್ರಸ್ಟಿ ಮ್ಯಾಥ್ಯೂ ಕೆ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹರ್ಷಿತಾ ನಿರೂಪಿಸಿದರು.
ಎನ್.ಎಚ್-75ರಲ್ಲಿರುವ ಮಿನ್ನರ್ವ ಕಾಲೇಜಿನಲ್ಲಿ ಪ್ರಾರಂಭಗೊಂಡಿರುವ ವಿ.ಟಿ.ಯು ಸಂಯೋಜಿತ ಕೋರ್ಸ್‌ಗಳು ಮಂಗಳೂರು ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವ ಮೂಲಕ ಈ ಭಾಗದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರಲಿವೆ ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.