ಮಂಗಳೂರು: “2030ರ ವೇಳೆಗೆ ಕರ್ನಾಟಕವನ್ನು ಭಾರತದ ಜೂಡೋ ಪ್ರಧಾನ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ‘ವಿಷನ್ 2030’ ನೀಲನಕ್ಷೆ ಆರಂಭಿಸಲಾಗಿದೆ” ಎಂದು ಕರ್ನಾಟಕ ಸ್ಟೇಟ್ ಜೂಡೋ ಸ್ಪೋರ್ಟ್ಸ್ ಅಸೊಸಿಯೇಶನ್ ಪ್ರಮುಖರಾದ ಯತೀಶ್ ನಾರಾಯಣ್ ಬಂಗೇರ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಸೇರಿದಂತೆ ರಾಜ್ಯದ ಜೂಡೋ ಕ್ರೀಡೆಯ ಗತವೈಭವವನ್ನು ಮರುಸ್ಥಾಪಿಸಲು ಈ ದೂರದೃಷ್ಟಿಯ ಯೋಜನೆ ರೂಪಿಸಲಾಗಿದೆ ಎಂದರು. 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರಕ್ಕೆ ಗರಿಷ್ಠ ಪದಕಗಳನ್ನು ತಂದುಕೊಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
‘ಗ್ರಾಸ್‌ರೂಟ್ಸ್ ಟು ಗೋಲ್ಡ್’ ಕಾರ್ಯಕ್ರಮದಡಿ ಗ್ರಾಮೀಣ ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಬೆಳೆಸಲಾಗುವುದು. ಉಡುಪಿ, ಮಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಕ್ರೀಡಾ ಸಂಸ್ಥೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಾಯಕತ್ವವು ಕ್ರೀಡಾಪಟುಗಳ ಪ್ರಗತಿಗಿಂತ ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡುತ್ತಿದೆ. ಆಡಳಿತಾತ್ಮಕ ವೈಫಲ್ಯಗಳಿಂದ ಸಂಸ್ಥೆಗಳು ಹಿನ್ನಡೆಯಾಗುತ್ತಿವೆ” ಎಂದು ಹೇಳಿದರು. ಇದನ್ನು ಸರಿಪಡಿಸಲು ಡಿಜಿಟಲ್ ಪೋರ್ಟಲ್ ಮೂಲಕ ಪಾರದರ್ಶಕ ನೋಂದಣಿ ವ್ಯವಸ್ಥೆ ಹಾಗೂ ಮೂರನೇ ವ್ಯಕ್ತಿಯಿಂದ ಹಣಕಾಸು ಲೆಕ್ಕಪರಿಶೋಧನೆ ಜಾರಿಗೆ ತರಲಾಗುವುದು ಎಂದು ಘೋಷಿಸಿದರು.
ಶಾಲೆಗಳಲ್ಲಿ ಆತ್ಮರಕ್ಷಣೆಗಾಗಿ ಜೂಡೋವನ್ನು ಕಡ್ಡಾಯ ಆಯ್ಕೆಯಾಗಿ ಪರಿಚಯಿಸುವುದರ ಜೊತೆಗೆ, ಪದಕ ವಿಜೇತರಿಗೆ ಪೊಲೀಸ್ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ರದ್ದುಗೊಂಡಿರುವ ಕ್ರೀಡಾ ಕೋಟಾವನ್ನು ಪುನಃಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. “ಭ್ರಷ್ಟಾಚಾರದ ಯುಗ ಕೊನೆಗೊಳ್ಳಬೇಕು; ಕ್ರೀಡಾಪಟುಗಳ ಯುಗ ಆರಂಭವಾಗಬೇಕು” ಎಂದು ಅವರು ಅಭಿಪ್ರಾಯಪಟ್ಟರು. ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ. ಮೊಂತೆರೋ ಉಪಸ್ಥಿತರಿದ್ದರು.