ಮಂಗಳೂರು: Anti-Defection Law (ಡೆಫೆಕ್ಷನ್ ವಿರೋಧಿ ಕಾನೂನು) ಅನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವಿವಿಧ ರಾಜ್ಯಗಳ ಸಭಾಧ್ಯಕ್ಷರು, ಕಾನೂನು ತಜ್ಞರು ಮತ್ತು ಸಂವಿಧಾನ ತಜ್ಞರು ವ್ಯಕ್ತಪಡಿಸಿದ್ದಾರೆ ಎಂದು ಸಭಾಧ್ಯಕ್ಷರಾದ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಸಮನ್ವಯ ಸಭೆ ಮುಂಬೈ ನಲ್ಲಿ ನಡೆದಿದ್ದು, ನಂತರದ ಎರಡನೇ ಸಭೆ ಪುರಿ ಯಲ್ಲಿ ಎರಡು ದಿನಗಳ ಕಾಲ ನಡೆಯಿತು ಎಂದರು. ಈ ಸಭೆಗಳಲ್ಲಿ ಮಹಾರಾಷ್ಟ್ರ, ಒಡಿಶಾ, ನಾಗಾಲ್ಯಾಂಡ್ ಹಾಗೂ ಕರ್ನಾಟಕ ರಾಜ್ಯಗಳ ಸಭಾಧ್ಯಕ್ಷರು ಭಾಗವಹಿಸಿದ್ದರು ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯವಾಗಿ ಡೆಫೆಕ್ಷನ್ ಕಾನೂನಿನ ದೌರ್ಬಲ್ಯಗಳು ಹಾಗೂ ಅದನ್ನು ಇನ್ನಷ್ಟು ಪರಿಣಾಮಕಾರಿ ಮಾಡುವ ಮಾರ್ಗಗಳ ಕುರಿತು ಚರ್ಚೆ ನಡೆಯಿತು. ಇತ್ತೀಚೆಗೆ ಡೆಫೆಕ್ಷನ್ ಮಾತ್ರವಲ್ಲದೆ ಸಂಪೂರ್ಣ ಪಕ್ಷವೇ ವಿಭಜನೆಯಾಗುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ “ಮೂಲ ಪಕ್ಷ ಯಾವುದು?” ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಪ್ರಸ್ತುತ ಈ ನಿರ್ಧಾರ ಸಭಾಧ್ಯಕ್ಷರ ಅಧೀನದಲ್ಲಿದ್ದು, ಇದು ವಿವಾದಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಈ ಅಧಿಕಾರವನ್ನು ಸಭಾಧ್ಯಕ್ಷರಿಂದ ತೆಗೆದು, ಪ್ರತ್ಯೇಕ ಕಾನೂನು ಹಾಗೂ ಸಂವಿಧಾನ ತಜ್ಞರ ಸಮಿತಿಗೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಹೇಳಿದರು.
ಇದೇ ವೇಳೆ, ವಿಪ್ ಜಾರಿಯ ವಿಷಯದಲ್ಲಿಯೂ ಗೊಂದಲವಿದ್ದು, ಪಕ್ಷದ ಅಧಿಕೃತ ವಿಪ್‌ಗೆ ಆದ್ಯತೆ ನೀಡಬೇಕಾ ಅಥವಾ ಶಾಸಕಾಂಗ ಪಕ್ಷದ (CLP) ವಿಪ್‌ಗೆ ಮಹತ್ವ ನೀಡಬೇಕಾ ಎಂಬ ಬಗ್ಗೆ ಸ್ಪಷ್ಟ ನಿಯಮಾವಳಿ ರೂಪಿಸುವ ಅಗತ್ಯವಿದೆ ಎಂದು ಸೂಚಿಸಲಾಯಿತು ಎಂದರು.
ಎಷ್ಟೇ ಕಾನೂನುಗಳಿದ್ದರೂ ಡೆಫೆಕ್ಷನ್ ಘಟನೆಗಳು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಕಠಿಣ ಕ್ರಮಗಳನ್ನು ಜಾರಿಗೆ ತರಬೇಕೆಂಬ ಅಭಿಪ್ರಾಯವೂ ವ್ಯಕ್ತವಾಯಿತು. ವಿಶೇಷವಾಗಿ, ಪಕ್ಷದಿಂದ ದೂರವಾಗಿ ಪ್ರತ್ಯೇಕವಾಗಿ ಕುಳಿತುಕೊಳ್ಳುವ ಶಾಸಕರು ವಿಶ್ವಾಸ ಮತ (No-Confidence Motion) ವೇಳೆ ಮಾತ್ರ ಮತದಾನಕ್ಕೆ ಬರುವ ಪ್ರಕ್ರಿಯೆಯನ್ನು ತಡೆಯಬೇಕು ಎಂದು ಸಲಹೆ ನೀಡಲಾಯಿತು ಎಂದು ಹೇಳಿದರು.