ಮಂಗಳೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಸ್ಥೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಸಂಸ್ಥೆಯ 34ನೇ ವರ್ಷದ ವಾರ್ಷಿಕ ಮಹೋತ್ಸವ ಸಮಾರಂಭ ಮೇ 17ರಂದು ಮಂಗಳೂರಿನ ರೆಡ್ ಕ್ರಾಸ್ ಸಭಾಭವನದಲ್ಲಿ ನಡೆಯಲಿದೆ.

ಸಮಾಜದಲ್ಲಿ ಕಡೆಗಣನೆಗೆ ಒಳಗಾಗಿರುವ ಅಶಕ್ತ ಹಾಗೂ ದೈಹಿಕ ವಿಶೇಷಚೇತನರನ್ನು ಒಗ್ಗೂಡಿಸಿ, ಅವರ ಹಕ್ಕುಗಳ ರಕ್ಷಣೆ ಹಾಗೂ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಸಂಸ್ಥೆಯನ್ನು 1992ರಲ್ಲಿ ಮಂಗಳೂರಿನಲ್ಲಿ ಸ್ಥಾಪಿಸಲಾಯಿತು. ಖ್ಯಾತ ಮೂಳೆರೋಗ ತಜ್ಞ ಡಾ. ಎಂ. ಶಾಂತರಾಮ ಶೆಟ್ಟಿ ಅವರ ಮಾರ್ಗದರ್ಶನ ಮತ್ತು ಡಾ. ಮುರಲೀಧರ ನಾಯ್ಕ ಅವರ ನೇತೃತ್ವದಲ್ಲಿ ಕೆಲವೇ ದೈಹಿಕ ಅಶಕ್ತರೊಂದಿಗೆ ಆರಂಭವಾದ ಸಂಸ್ಥೆ ಇಂದು 5,000ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.

ಕಳೆದ 34 ವರ್ಷಗಳಿಂದ ಸಂಸ್ಥೆ ವಿಶೇಷಚೇತನರ ನೆರವಿಗೆ ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಸದಸ್ಯರಿಗೆ ಉಚಿತ ಗುಂಪು ವಿಮೆ, ವಿದ್ಯಾರ್ಥಿವೇತನ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ ‘ಚೈತನ್ಯ ವೃತ್ತಿ ತರಬೇತಿ ಕೇಂದ್ರ’ದ ಮೂಲಕ ಕಂಪ್ಯೂಟರ್, ಟೈಲರಿಂಗ್ ಹಾಗೂ ಸ್ಕ್ರೀನ್ ಪ್ರಿಂಟಿಂಗ್ ಸೇರಿದಂತೆ ಸ್ವಯಂ ಉದ್ಯೋಗ ತರಬೇತಿಗಳನ್ನು ಉಚಿತವಾಗಿ ನೀಡುತ್ತಿದೆ.

ಈ ಬಾರಿಯ ವಾರ್ಷಿಕ ಮಹೋತ್ಸವದಲ್ಲಿ ಆಯ್ದ ವಿಶೇಷಚೇತನ ವಿದ್ಯಾರ್ಥಿಗಳಿಗೆ ತಲಾ ₹1,000 ವಿದ್ಯಾರ್ಥಿವೇತನ ವಿತರಿಸಲಾಗುವುದು. ಜೊತೆಗೆ ಆಯ್ಕೆಯಾದ ವಿಶೇಷಚೇತನರಿಗೆ ಗರಿಷ್ಠ ₹3,000ವರೆಗೆ ವೈದ್ಯಕೀಯ ಚಿಕಿತ್ಸಾ ನೆರವು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.ಕಾರ್ಯಕ್ರಮದ ಅಂಗವಾಗಿ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಆಯೋಜಿಸಲಾಗಿದೆ.
ಸಮಾರಂಭವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಪತಿ ಆರ್.ಟಿ.ಎನ್. ಸಿ.ಎ. ಶಾಂತರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ವೈದ್ಯರಾದ ಡಾ. ಎಂ. ಶಾಂತರಾಮ ಶೆಟ್ಟಿ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ .

