ಬಿ.ಕೆ. ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡಬೇಕು: ಅಖಿಲ ಭಾರತ ಬಿಲ್ಲವ ಸಂಘಟನೆ ಆಗ್ರಹ

ಮಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ಸಚಿವ ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಖಿಲ ಭಾರತ ಬಿಲ್ಲವ ಸಂಘಟನೆ ಒತ್ತಾಯಿಸಿದೆ.

ನಗರದ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಿಲ್ಲವ ಸಮುದಾಯಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಬೇಕು ಎಂಬುದು ಸಮಾಜದ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್ ಅವರು ಬಿಲ್ಲವ ಸಮಾಜದ ಅಗ್ರಗಣ್ಯ ನಾಯಕ, ಹಿರಿಯ ಮುತ್ಸದ್ದಿ ಹಾಗೂ ಅನುಭವಿ ರಾಜಕಾರಣಿಯಾಗಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕರಾಗಿ ಅವರು ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ನ್ಯಾಯ ಮತ್ತು ಸಾಮಾಜಿಕ ಸಮಾನತೆಯ ಪರವಾಗಿ ಯಾವುದೇ ರಾಜಿಯಿಲ್ಲದೆ ಹೋರಾಟ ನಡೆಸಿರುವ ಅವರು ಜಾತ್ಯತೀತ ಮೌಲ್ಯಗಳನ್ನು ಸದಾ ಎತ್ತಿಹಿಡಿದಿದ್ದಾರೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳಿಂದ ಪ್ರೇರಿತರಾಗಿರುವ ಹರಿಪ್ರಸಾದ್ ಅವರು ಇತ್ತೀಚೆಗೆ ನಡೆದ ಗುರು-ಗಾಂಧಿ ಸಂವಾದದ ಶತಮಾನೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಸಂಘಟಿಸುವ ಮೂಲಕ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಪಸರಿಸಿದ್ದಾರೆ. ಇಂತಹ ಸಮರ್ಥ ನಾಯಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬುದು ಬಿಲ್ಲವ ಸಮಾಜದ ಒಕ್ಕೊರಲಿನ ಆಗ್ರಹವಾಗಿದೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯ ಬಹುಸಂಖ್ಯಾತರಾಗಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ದೊರೆಯದಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಹಿಂದುಳಿದ ಹಾಗೂ ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಾಯಕರಲ್ಲಿ ಹರಿಪ್ರಸಾದ್ ಪ್ರಮುಖರಾಗಿದ್ದು, ಸಚಿವ ಸಂಪುಟದಲ್ಲಿ ಅವರ ಉಪಸ್ಥಿತಿ ಸರ್ಕಾರದ ಕಾರ್ಯಕ್ಷಮತೆ ಮತ್ತು ಸಂಸದೀಯ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಮಾಜದ ಮುಖಂಡರಾದ ಪದ್ಮನಾಭ ಕೋಟ್ಯಾನ್, ಸೋಮಸುಂದರ್, ಗಣೇಶ್ ಪೂಜಾರಿ, ಪ್ರವೀಳಾ ರಾಜೇಂದ್ರ ಚಿಲಿಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!