ಬೀದಿ ಬದಿ ವ್ಯಾಪಾರಿಗಳ ವಿಚಾರದಲ್ಲಿ ಪಾಲಿಕೆ ವೈಫಲ್ಯ: ಎಎಪಿ ಆಕ್ರೋಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ವ್ಯಾಪಾರ ವಲಯಗಳನ್ನು ಗುರುತಿಸಲು ವಿಫಲವಾಗಿರುವ ಪಾಲಿಕೆಯ ಕ್ರಮವನ್ನು ಆಮ್ ಆದ್ಮಿ ಪಾರ್ಟಿ (ಎಎಪಿ) ತೀವ್ರವಾಗಿ ಖಂಡಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಪುರಭವನದ ಸಮೀಪ ಅನಧಿಕೃತ ಬೀದಿ ಬದಿ ವ್ಯಾಪಾರಿಗಳ ವಿಚಾರವಾಗಿ ಇತ್ತೀಚೆಗೆ ಸಾರ್ವಜನಿಕರಲ್ಲಿ ವ್ಯಕ್ತವಾದ ಆಕ್ರೋಶವು ಪಾಲಿಕೆಯ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ಆರೋಪಿಸಿದರು.

ನೈರ್ಮಲ್ಯದ ಕೊರತೆ, ಕಾಲುದಾರಿ ಅತಿಕ್ರಮಣ ಹಾಗೂ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದ್ದರೂ, ನಗರದ ಬಡ ವ್ಯಾಪಾರಿಗಳ ಜೀವನೋಪಾಯವನ್ನು ರಕ್ಷಿಸುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಟೀಕಿಸಿದರು.

ಬೀದಿ ಬದಿ ವ್ಯಾಪಾರಿಗಳು ನಗರ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಕೇಂದ್ರ ಸರ್ಕಾರವೂ ವಿವಿಧ ಯೋಜನೆಗಳ ಮೂಲಕ ಅವರ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದೆ. ಆದರೆ ಸೂಕ್ತ ವ್ಯಾಪಾರ ವಲಯಗಳನ್ನು ಗುರುತಿಸದಿರುವುದರಿಂದ ಪಾಲಿಕೆಯು ಬಡ ವ್ಯಾಪಾರಿಗಳ ಉದ್ಯೋಗಾವಕಾಶಗಳನ್ನು ಕಸಿದುಕೊಂಡಂತಾಗಿದೆ ಎಂದು ಅವರು ಹೇಳಿದರು.

ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ) ಕಾಯ್ದೆಯಲ್ಲಿ ವ್ಯಾಪಾರ ವಲಯಗಳ ಗುರುತಿಸುವಿಕೆ ಹಾಗೂ ಬಯೋಮೆಟ್ರಿಕ್ ಪರವಾನಗಿ ವಿತರಣೆಗೆ ಸ್ಪಷ್ಟ ಮಾರ್ಗಸೂಚಿಗಳಿದ್ದರೂ, ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ವಿಳಂಬ ನೀತಿಯಿಂದ ಈ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಹಣಕಾಸು ನೆರವು ಯೋಜನೆಗಳೂ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ವ್ಯಾಪಾರಿಗಳಿಗೆ ಅದರ ಪ್ರಯೋಜನ ದೊರೆಯುತ್ತಿಲ್ಲ ಎಂದು ಅವರು ದೂರಿದರು.

ಮಂಗಳೂರು ಮಹಾನಗರ ಪಾಲಿಕೆ ತಕ್ಷಣವೇ ಪ್ರತ್ಯೇಕ ಬೀದಿ ಬದಿ ವ್ಯಾಪಾರ ವಲಯಗಳನ್ನು ಗುರುತಿಸಬೇಕು, ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಹಾಗೂ ಅರ್ಹ ವ್ಯಾಪಾರಿಗಳಿಗೆ ವಿಳಂಬವಿಲ್ಲದೆ ಲೈಸೆನ್ಸ್ ವಿತರಿಸಬೇಕು ಎಂದು ಎಎಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಎಎಪಿ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮುದ್ರಾಡಿ, ಜಿಲ್ಲಾ ಕಾರ್ಯದರ್ಶಿಗಳಾದ ಕಬೀರ್ ಕಾಟಿಪಳ್ಳ ಹಾಗೂ ವಾಸುದೇವ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಮುಖಂಡರಾದ ಶಾಲಟ್ ಪಿಂಟೊ ಮತ್ತು ಸುಜಾತ ಯತೀಶ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!