ಮಂಗಳೂರು, ಜೂನ್ 4: ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮವನ್ನು ಪ್ರತಿನಿಧಿಸುವ ಸರ್ವೋಚ್ಛ ಸಂಸ್ಥೆಯಾದ National Restaurant Association of India (NRAI)ಯ ಮಂಗಳೂರು ಮತ್ತು ಪಶ್ಚಿಮ ಕರ್ನಾಟಕ ಅಧ್ಯಾಯದ ಅಧಿಕೃತ ಉದ್ಘಾಟನಾ ಸಮಾರಂಭವು ಇಂದು ಸಂಜೆ 6 ಗಂಟೆಗೆ ನಗರದ ಹೋಟೆಲ್ ಅವತಾರ್ನಲ್ಲಿ ನಡೆಯಲಿದೆ ಎಂದು NRAI ಪ್ರಧಾನ ಕಾರ್ಯದರ್ಶಿ ಪ್ರಕುಲ್ ಕುಮಾರ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುವುದು, ಆತಿಥ್ಯ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡುವುದು ಹಾಗೂ ಕರಾವಳಿ ಕರ್ನಾಟಕವನ್ನು ಪ್ರಮುಖ ಆಹಾರ ಮತ್ತು ಪ್ರವಾಸೋದ್ಯಮ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಈ ಅಧ್ಯಾಯದ ಆರಂಭ ಮಹತ್ವದ ಮೈಲುಗಲ್ಲಾಗಲಿದೆ ಎಂದು ಹೇಳಿದರು.
ಕರ್ನಾಟಕದ ಆಹಾರ ಮತ್ತು ಆತಿಥ್ಯ ಕ್ಷೇತ್ರವು ನಿರಂತರ ಬೆಳವಣಿಗೆಯ ಹಾದಿಯಲ್ಲಿದ್ದು, ಜನರ ಪ್ರವಾಸೋದ್ಯಮದತ್ತ ಹೆಚ್ಚುತ್ತಿರುವ ಆಸಕ್ತಿ, ಜೀವನಮಟ್ಟದ ಸುಧಾರಣೆ ಹಾಗೂ ಆದಾಯದ ಏರಿಕೆ ಈ ಕ್ಷೇತ್ರದ ಅಭಿವೃದ್ಧಿಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ತಿಳಿಸಿದರು.
ಮಂಗಳೂರು ಮತ್ತು ಪಶ್ಚಿಮ ಕರ್ನಾಟಕ ಪ್ರದೇಶವು ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಆತಿಥ್ಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಹೆಚ್ಚುತ್ತಿರುವ ಉಪಹಾರ ಗೃಹಗಳು, ಕೆಫೆಗಳು, ಬಾರ್ಗಳು, ಕ್ಲೌಡ್ ಕಿಚನ್ಗಳು ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ವಿವಿಧ ಉದ್ಯಮಗಳ ಬೆಳವಣಿಗೆ ಈ ಪ್ರದೇಶದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತಿದೆ ಎಂದು ಹೇಳಿದರು.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ವಾರ್ಷಿಕವಾಗಿ 11 ಕೋಟಿಗೂ ಅಧಿಕ ದೇಶೀಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದು ರಾಜ್ಯದ ಒಟ್ಟು ದೇಶೀಯ ಪ್ರವಾಸಿಗರ ಸಂಖ್ಯೆಯ ಶೇ.10 ರಿಂದ 15ರಷ್ಟು ಪಾಲನ್ನು ಹೊಂದಿರುವುದು ವಿಶೇಷವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪ್ರಶಾಂತ್ ರಾವ್ ಅರೂರ್, ಡೆನ್ ಡಿಸೋಜ, ಅಶ್ವಿನ್ ರೈ, ಸುಧಾಕರ್ ಪೂಂಜಾ, ಶಿವಪ್ರಸಾದ್ ಶೆಟ್ಟಿ ಹಾಗೂ ವರದ್ ರಾಜ್ ಶೆಣೈ ಉಪಸ್ಥಿತರಿದ್ದರು.