ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತಾವಧಿಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಬಿಜೆಪಿ ವತಿಯಿಂದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಸಹ ವಿಶೇಷ ಕಾರ್ಯಕ್ರಮಗಳ ಇಂದಿನಿಂದ ಜೂನ್ 21 ರ ತನಕ ಆಚರಿಸಲಾಗುವುದೆಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದರು .
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , , 2014ರ ಮೇ 26ರಂದು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು ನಿರಂತರ 12 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದ್ದು, ದೇಶದ ಅಭಿವೃದ್ಧಿಗೆ ಹಲವು ಮಹತ್ವದ ಯೋಜನೆಗಳು ಹಾಗೂ ಐತಿಹಾಸಿಕ ನಿರ್ಧಾರಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಅಯೋಧ್ಯೆ ರಾಮಮಂದಿರ ವಿಚಾರಕ್ಕೆ ಪರಿಹಾರ, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವಿಶೇಷ ಕ್ರಮಗಳು ಹಾಗೂ ದೇಶದಲ್ಲಿ ನಕ್ಸಲ್ವಾದ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಸಾಧನೆ ಮಾಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಂತರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಒದಗಿಸಲಾಗಿದೆ. ಉಜ್ವಲ ಯೋಜನೆಯಡಿ 10 ಕೋಟಿಗೂ ಅಧಿಕ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸ್ವಚ್ಛ ಭಾರತ್ ಅಭಿಯಾನದಡಿ 11 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣವಾಗಿದ್ದು, ಜಲಜೀವನ್ ಮಿಷನ್ ಮೂಲಕ ದೇಶದಾದ್ಯಂತ 14.9 ಕೋಟಿಗೂ ಹೆಚ್ಚು ಮನೆಗಳಿಗೆ ನಳದ ಮೂಲಕ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲು ಜಲಜೀವನ್ ಮಿಷನ್ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ 30 ಕೋಟಿಗೂ ಅಧಿಕ ಜನರಿಗೆ ಆರೋಗ್ಯ ಭದ್ರತೆ ಒದಗಿಸಲಾಗಿದ್ದು, ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮೂಲಕ ಡಿಜಿಟಲ್ ಸೇವೆಗಳ ವಿಸ್ತರಣೆ ಹಾಗೂ ನೇರ ಹಣ ವರ್ಗಾವಣೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿಗಳಿಗೆ ನೇರ ಅನುದಾನ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಕೆಲವು ಅನುದಾನಗಳ ವಿಳಂಬಕ್ಕೆ ಬಳಕೆ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಉಂಟಾದ ಸಮಸ್ಯೆಗಳು ಹಾಗೂ ಪಂಚಾಯಿತಿ ಚುನಾವಣೆಗಳ ವಿಳಂಬವೂ ಕಾರಣವಾಗಿವೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 12 ವರ್ಷಗಳಲ್ಲಿ ದೇಶದ ಅಭಿವೃದ್ಧಿ, ಮೂಲಸೌಕರ್ಯ, ಕಲ್ಯಾಣ ಯೋಜನೆಗಳು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪ್ರೇಮಾನಂದ ಶೆಟ್ಟಿ , ಯತೀಂದ್ರ ಆಳ್ವ , ಧನಲಕ್ಷ್ಮಿ , ಸಂಜಯ್ ಪ್ರಭು , ವಸಂತ ಪೂಜಾರಿ , ಡಾ ಮಮತಾ ರಾವ್ , ಉಮೇಶ್ ಕೊಟ್ಯಾನ್ , ನಂದನ್ ಮಲ್ಯ ಸಹಿತ ಮುಂತಾದವರು ಉಪಸ್ಥಿತರಿದ್ದರು .