ಬೀದಿ ವ್ಯಾಪಾರಸ್ಥರ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಸರಿಯಲ್ಲ : ಪ್ರಸನ್ನ ರವಿ ಆಗ್ರಹ

ಮಂಗಳೂರು: ಮಂಗಳೂರು ನಗರದ ಪುರಭವನದ ಫುಟ್‌ಪಾತ್‌ನಿಂದ ಸ್ಟೇಟ್ ಬ್ಯಾಂಕ್, ರಾವ್ ಆ್ಯಂಡ್ ರಾವ್ ಸರ್ಕಲ್ ಹಾಗೂ ಲೇಡಿಗೋಷನ್ ಆಸ್ಪತ್ರೆವರೆಗೆ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ಬೀದಿ ವ್ಯಾಪಾರ ಚಟುವಟಿಕೆಗಳ ಕುರಿತು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು , ಬೀದಿ ವ್ಯಾಪಾರಸ್ಥರ ಜೀವನೋಪಾಯಕ್ಕೆ ತಾವು ವಿರೋಧಿಯಲ್ಲ, ಆದರೆ ಅವರಿಗೆ ಮಹಾನಗರ ಪಾಲಿಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕು . ಬೀದಿ ಬದಿ ವ್ಯಾಪಾರಸ್ಥರ ಪರ ಹೋರಾಟ ನಡೆಸುತ್ತಿರುವ ಕೆಲ ಸಂಘಟನೆಗಳು ಹಾಗೂ ನಾಯಕರು ಶಾಶ್ವತ ಪರಿಹಾರಕ್ಕಾಗಿ ಒತ್ತಡ ಹೇರುವ ಬದಲು ಫುಟ್‌ಪಾತ್‌ನಲ್ಲಿ ಅಕ್ರಮ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ವ್ಯಾಪಾರಸ್ಥರಿಗೆ ನಿಗದಿತ ಸ್ಥಳ ಒದಗಿಸುವಂತೆ ಮಹಾನಗರ ಪಾಲಿಕೆ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಬೇಕೇ ಹೊರತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಫುಟ್‌ಪಾತ್ ಆಕ್ರಮಣಕ್ಕೆ ಅವಕಾಶ ನೀಡಬಾರದು ಎಂದರು.

ಬೀದಿ ವ್ಯಾಪಾರಸ್ಥರ ಹೆಸರಿನಲ್ಲಿ ಕೆಲವರು ಪ್ರತಿದಿನ ₹20 ಸಂಗ್ರಹಿಸುತ್ತಿದ್ದಾರೆ . ಈ ಹಣವನ್ನು ನಗರ ಪಾಲಿಕೆಗೆ ಸಲ್ಲಿಸಬೇಕೇ ಹೊರತು ಖಾಸಗಿ ವ್ಯಕ್ತಿಗಳು ಸಂಗ್ರಹಿಸುವುದು ಸರಿಯಲ್ಲ ಎಂದು ಹೇಳಿದರು. ವ್ಯಾಪಾರಸ್ಥರ ಯೋಗಕ್ಷೇಮದ ಹೆಸರಿನಲ್ಲಿ ಹಣ ಸಂಗ್ರಹಿಸಿ ನಾಯಕತ್ವ ಪ್ರದರ್ಶಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಫುಟ್‌ಪಾತ್ ಆಕ್ರಮಣದಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಲೇಡಿಗೋಷನ್ ಆಸ್ಪತ್ರೆಗೆ ಬರುವ ರೋಗಿಗಳು, ಗರ್ಭಿಣಿಯರು ಹಾಗೂ ಹಿರಿಯ ನಾಗರಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಅವರು ಆರೋಪಿಸಿದರು. ಅಲ್ಲದೆ, ಈ ಪ್ರದೇಶದಲ್ಲಿ ಪಿಕ್‌ಪಾಕೆಟ್, ಮಹಿಳೆಯರ ಕಿರುಕುಳ ಸೇರಿದಂತೆ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿವೆ ಎಂದರು.

ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಅಡ್ಡಿಪಡಿಸುವ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಬಡ ವ್ಯಾಪಾರಿಗಳ ಮೇಲೆ ಪ್ರಕರಣ ದಾಖಲಿಸುವ ಬದಲು ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದರು. ಬೀದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳ ಒದಗಿಸಲು ಡಿಸಿ ಕಚೇರಿ ಸಮೀಪದ ಖಾಲಿ ಜಾಗ ಸೇರಿದಂತೆ ಪರ್ಯಾಯ ಸ್ಥಳಗಳ ಬಗ್ಗೆ ಮಹಾನಗರ ಪಾಲಿಕೆಗೆ ಸಲಹೆ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ನಾಯಕರಾದ ಇಮ್ತಿಯಾಜ್ ಹಾಗೂ ಸುನಿಲ್ ಬಜಾಲ್ ಅವರ ಹೆಸರನ್ನು ಉಲ್ಲೇಖಿಸಿದ ಅವರು , ಫುಟ್‌ಪಾತ್‌ನಲ್ಲಿ ಅಕ್ರಮ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವುದು, ಹಣ ಸಂಗ್ರಹಿಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಸರಿಯಲ್ಲ ಎಂದು ಆರೋಪಿಸಿದರು. ನಾಳೆ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು.

ನಗರದಲ್ಲಿ ಕೆಲವು ಹೋಟೆಲ್‌ಗಳು ನಿಗದಿತ ಸಮಯದ ನಂತರವೂ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಫೋಟೋ ಹಾಗೂ ದಾಖಲೆಗಳೊಂದಿಗೆ ಕಂಟ್ರೋಲ್ ರೂಂ, ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ಹೇಳಿದರು. ಎಲ್ಲರಿಗೂ ಒಂದೇ ಕಾನೂನು ಅನ್ವಯಿಸಬೇಕು, ಕೆಲವರಿಗೆ ಮಾತ್ರ ವಿನಾಯಿತಿ ನೀಡಬಾರದು. ಬೀದಿ ವ್ಯಾಪಾರಸ್ಥರನ್ನು ರಾಜಕೀಯ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಾರದು ಎಂದು ಒತ್ತಾಯಿಸಿದರು .

ಬೀದಿ ಬದಿ ವ್ಯಾಪಾರಿಗಳಿಗೆ ಶಾಶ್ವತ ವೆಂಡಿಂಗ್ ಜೋನ್ ವ್ಯವಸ್ಥೆ ಕಲ್ಪಿಸುವುದೇ ನಿಜವಾದ ಹೋರಾಟವಾಗಬೇಕು ಎಂದರು. ಈ ಕುರಿತು ಮಹಾನಗರ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!