ಮಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಕಗೊಂಡಿರುವ ಕೆಲವರು ನಿಗದಿತ ಅರ್ಹತಾ ಮಾನದಂಡಗಳನ್ನು ಹೊಂದಿಲ್ಲ. ಹೀಗಾಗಿ ಅವರ ನೇಮಕಾತಿ ಅಧಿಸೂಚನೆಯನ್ನು ತಕ್ಷಣ ಹಿಂಪಡೆದು, ಕಾನೂನಿನ ಪ್ರಕಾರ ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಕ್ಕಳ ಹಕ್ಕುಗಳ ಪರವಾಗಿ ಕಾರ್ಯನಿರ್ವಹಿಸುವ ಸಮಾನಾಸಕ್ತ ಸಂಘಟನೆಗಳು ಆಗ್ರಹಿಸಿವೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಡಿ ಸಂಸ್ಥೆಯ ಸಂಚಾಲಕ ರೆನ್ನಿ ಡಿಸೋಜಾ, ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂದು ಆರೋಪಿಸಿದರು.
ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ವೃತ್ತಿಪರ ಮತ್ತು ಅಸಾಧಾರಣ ಅನುಭವ ಹೊಂದಿರುವವರನ್ನು ಮಾತ್ರ ಆಯೋಗಕ್ಕೆ ನೇಮಕ ಮಾಡಬೇಕು ಎಂಬ ನಿಯಮವಿದೆ. ಆದರೆ 2026ರ ಮೇ 27ರಂದು ಹೊರಡಿಸಲಾದ ಅಧಿಸೂಚನೆಯಡಿ ನೇಮಕಗೊಂಡಿರುವ ಕೆಲವರು ಈ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಅವರು ಹೇಳಿದರು.
ಕಲಬುರಗಿ ಜಿಲ್ಲೆಯ ಸಂತೋಷ ಕುಮಾರ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಲಭ್ಯ ಮಾಹಿತಿಯ ಪ್ರಕಾರ ಅವರು ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿರುವ ಸೇವಾ ಪೂರೈಕೆದಾರರಾಗಿದ್ದಾರೆ. ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿರುವ ದಾಖಲೆಗಳು ಲಭ್ಯವಿಲ್ಲ ಎಂದು ಆರೋಪಿಸಿದರು.
ರಾಯಚೂರು ಜಿಲ್ಲೆಯ ಸತ್ಯನಾರಾಯಣ ಶೆಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಸಮೂಹದ ಸ್ಥಾಪಕರಾಗಿದ್ದು, ಶಿಕ್ಷಣದ ಹಕ್ಕು ಕಾಯ್ದೆ-2009ರ ಅನುಷ್ಠಾನ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತ ದೂರುಗಳ ಪರಿಶೀಲನೆ ಆಯೋಗದ ಪ್ರಮುಖ ಜವಾಬ್ದಾರಿಗಳಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರತಿನಿಧಿಯನ್ನು ಸದಸ್ಯರನ್ನಾಗಿ ನೇಮಕ ಮಾಡಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದರು.
ಬೀದರ್ ಜಿಲ್ಲೆಯ ಜಗನ್ನಾಥ ಹಲಮಡಗಿ ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾಗಿದ್ದು, 2022ರಿಂದ ನ್ಯಾಯಾಂಗ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಸಂಸ್ಥೆ ನಿಷ್ಕ್ರಿಯವಾಗಿರುವ ವರದಿಗಳಿವೆ. ಜೊತೆಗೆ ಅವರು ವಿವಿಧ ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರೂ, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಯಾವುದೇ ಸಾರ್ವಜನಿಕ ದಾಖಲೆಗಳು ಲಭ್ಯವಿಲ್ಲ ಎಂದು ರೆನ್ನಿ ಡಿಸೋಜಾ ಆರೋಪಿಸಿದರು.
ಆದ್ದರಿಂದ ಈ ನೇಮಕಾತಿ ಆದೇಶವನ್ನು ಹಿಂಪಡೆದು, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ವ್ಯಕ್ತಿಗಳನ್ನು ಆಯೋಗಕ್ಕೆ ನೇಮಕ ಮಾಡಬೇಕು. ಆಯ್ಕೆ ಪ್ರಕ್ರಿಯೆಯ ಕುರಿತು ಸ್ವತಂತ್ರ, ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಸಂಬಂಧಿತ ಅಧಿಕಾರಿಗಳ ಪಾತ್ರವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಕಮಲಾ, ಮಕ್ಕಳ ಮಾಸೋತ್ಸವ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಮುಹಮ್ಮದ್ ರಫೀಕ್ ಪುತ್ತೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅನಂತ ರಾವ್ ಹೇರಳೆ ಹಾಗೂ ಎ.ಕೆ. ಹಾರಿಸ್ ಉಪಸ್ಥಿತರಿದ್ದರು.