ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ; ಕೇವಲ ಪರಿಷ್ಕರಣೆ ಮಾತ್ರ: ಕಾಂಗ್ರೆಸ್ ಸ್ಪಷ್ಟನೆ

ಮಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಬಿಜೆಪಿ ನಾಯಕರ ಆರೋಪಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ಸುಳ್ಳು ಮತ್ತು ಅಪಪ್ರಚಾರ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸ್ಪಷ್ಟಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಅದರ ಪ್ರಯೋಜನ ರಾಜ್ಯದ ಮನೆಮನೆಗೂ ತಲುಪಿದೆ ಎಂದರು. ಆರಂಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕತೆ ಕುಸಿಯಲಿದೆ ಎಂದು ಟೀಕಿಸಿದ್ದ ಬಿಜೆಪಿ, ಬಳಿಕ ತನ್ನ ಆಡಳಿತದ ಹಲವು ರಾಜ್ಯಗಳಲ್ಲಿಯೂ ಇದೇ ಮಾದರಿಯ ಯೋಜನೆಗಳನ್ನು ಜಾರಿಗೊಳಿಸಿರುವುದು ಗಮನಾರ್ಹ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಕೈಬಿಡಲಿದೆ ಎಂಬ ವದಂತಿಗಳನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಹರಡುತ್ತಿದೆ. ಆದರೆ ಮುಖ್ಯಮಂತ್ರಿ ಹಾಗೂ ಸರ್ಕಾರದ ಹಿರಿಯ ನಾಯಕರು ಯೋಜನೆಗಳು ಮುಂದುವರಿಯಲಿವೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ನಡೆಯುತ್ತಿರುವುದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಪ್ರಕ್ರಿಯೆಯಾಗಿದ್ದು, ಅರ್ಹರಲ್ಲದ ಫಲಾನುಭವಿಗಳನ್ನು ಪಟ್ಟಿಯಿಂದ ಹೊರಗಿಡುವ ಕಾರ್ಯ ಮಾತ್ರ ನಡೆಯುತ್ತಿದೆ. ಮರಣ ಹೊಂದಿದ ವ್ಯಕ್ತಿಗಳ ಖಾತೆಗಳಿಗೆ ಗೃಹಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗಳ ಹಣ ಜಮೆಯಾಗುತ್ತಿರುವುದು ಹಾಗೂ ಆದಾಯ ತೆರಿಗೆ ಪಾವತಿಸುವ ಕೆಲವರಿಗೂ ಸೌಲಭ್ಯ ದೊರೆಯುತ್ತಿರುವುದು ಪತ್ತೆಯಾಗಿದ್ದು, ಇಂತಹ ಅನರ್ಹರನ್ನು ಗುರುತಿಸಿ ಸೌಲಭ್ಯ ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇದರಿಂದ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ರದ್ದಾಗುವುದಿಲ್ಲ ಅಥವಾ ಸ್ಥಗಿತಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಹರೀಶ್ ಕುಮಾರ್, ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಕೇಂದ್ರದ ಬಳಿ ಎಂದಿಗೂ ಹಣ ಕೇಳಿಲ್ಲ ಎಂದು ಹೇಳಿದರು. ರಾಜ್ಯಕ್ಕೆ ಸಂವಿಧಾನಾತ್ಮಕವಾಗಿ ದೊರಕಬೇಕಾದ ತೆರಿಗೆ ಪಾಲು, ಜಿಎಸ್‌ಟಿ ಬಾಕಿ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ಸೇರಿದಂತೆ ವಿವಿಧ ಬಾಕಿ ಅನುದಾನಗಳನ್ನು ಬಿಡುಗಡೆ ಮಾಡುವಂತೆ ಮಾತ್ರ ಕೇಂದ್ರವನ್ನು ಒತ್ತಾಯಿಸಲಾಗುತ್ತಿದೆ ಎಂದರು.

ಕರ್ನಾಟಕ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲು ಯಾವುದೇ ಆರ್ಥಿಕ ತೊಂದರೆ ಇಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್. ಪೂಜಾರಿ, ಶಶಿಧರ್ ಹೆಗ್ಡೆ, ಶುಭೋದಯ ಆಳ್ವ, ಅಪ್ಪಿ, ಶಾಹುಲ್ ಹಮೀದ್, ಪ್ರಕಾಶ್ ಸಾಲಿಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!