ರಸಗೊಬ್ಬರ ದರ ಏರಿಕೆಯಿಂದ ರೈತರ ದೋಚಾಟ: ಕೆಆರ್‌ಎಸ್ ಗಂಭೀರ ಆರೋಪ

ಪುತ್ತೂರು; ರೈತರಿಗೆ ಅಗತ್ಯವಾದ ರಸಗೊಬ್ಬರಗಳ ಅಭಾವ ಸೃಷ್ಟಿಸಿ ದರ ಏರಿಕೆ ಮಾಡಿ ರೈತರನ್ನು ವಂಚಿಸುವ ಕೆಲಸ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ. ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟು ಮಾಡುವ ಮೂಲಕ ಸಬ್ಸಿಡಿ ವ್ಯಾಪ್ತಿಗೆ ಬರುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳ ಮೂಲ ಬೆಲೆಯಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ಹಣವನ್ನು ರೈತರಿಂದ ಮಾರಾಟಗಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ದೋಚುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಆರೋಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೃಷಿಪ್ರದಾನವಾಗಿರುವ ನಮ್ಮ ರಾಜ್ಯದಲ್ಲಿ ರೈತರ ಹಿತ ಕಾಪಾಡುವಲ್ಲಿ ಕೃಷಿ ಇಲಾಖೆ ಸಹಿತ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಡಿಎಪಿ ರಸಗೊಬ್ಬರದ ಮೂಲ ಬೆಲೆ 1350 ಇದ್ದರೆ, ಅದನ್ನು 1500ರಿಂದ 2100 ತನಕ ಮಾರಾಟ ಮಾಡಲಾಗುತ್ತಿದೆ. ಯೂರಿಯಾದ ಮೂಲಬೆಲೆ 266.5 ಇದ್ದರೆ, ಅದನ್ನು 320ರಿಂದ 600 ತನಕದ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೀಗೆ ದುಬಾರಿ ದರಕ್ಕೆ ಮಾರಾಟ ಮಾಡುವ ಡೀಲರ್ ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ರಾಜ್ಯದಲ್ಲಿ ಕೃಷಿ ಇಲಾಖೆ ಸರಿಯಾದ ಬೇಡಿಕೆ ನೀಡದೆ ಕೃತಕ ಅಭಾವ ಸೃಷ್ಟಿಸುವ ಮೂಲಕ ರಸಗೊಬ್ಬರ ಮಾರಾಟಗಾರರಿಗೆ ಹಣ ಮಾಡಲು ಸಹಾಯ ಮಾಡುತ್ತಿದೆ. ಡೀಲರ್ ಗಳು ಮಾಡುತ್ತಿರುವ ಅನ್ಯಾಯವನ್ನು ತಡೆಯಬೇಕಾದ ಕೃಷಿ ಇಲಾಖೆ ಕಣ್ಣುಮುಚ್ಚಿ ಕುಳಿತು ಅಕ್ರಮಕ್ಕೆ ಪೂರಕಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.


ರಸಗೊಬ್ಬರ ಖರೀದಿಯೊಂದಿಗೆ ಲಿಂಕ್ ಪ್ರಾಡೆಕ್ಟ್ ಖರೀದಿ ಮಾಡಲೇ ಬೇಕು ಎಂಬ ಕಡ್ಡಾಯವನ್ನು ಮಾಡುವ ವ್ಯವಸ್ಥೆಯಿಂದ ಅನಗತ್ಯವಾದ ಹೊರೆ ರೈತನ ಮೇಲೆ ಹಾಕಲಾಗುತ್ತಿದೆ. ರಸಗೊಬ್ಬರ ಕಂಪೆನಿಗಳು ರಾಜಾರೋಷವಾಗಿ ರೈತರನ್ನು ಸುಲಿಗೆ ಮಾಡುತ್ತಿವೆ. ಈ ಲಿಂಕ್ ಪ್ರಾಡೆಕ್ಟ್ ಗಳನ್ನು ಖರೀದಿ ಮಾಡದ ರೈತರಿಗೆ ರಸಗೊಬ್ಬರ ಖರೀದಿಗೆ ತಡೆ ಒಡ್ಡಲಾಗುತ್ತಿದೆ. ಸರ್ಕಾರ ಈ ವಿಚಾರದ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಮಾರಾಟಗಾರರ ಅಂಗಡಿ-ಸೊಸೈಟಿಗಳಿಗೆ ರಸಗೊಬ್ಬರವನ್ನು ತಲುಪಿಸುವ ಜವಾಬ್ದಾರಿ ರಸಗೊಬ್ಬರ ಕಂಪೆನಿಯದ್ದಾಗಿದೆ. ಆದರೆ ಕಂಪೆನಿಗಳು ಮಾರಾಟಗಾರರ ಮೇಲೆ ಈ ವೆಚ್ಚವನ್ನು ಹೊರಿಸುತ್ತಿವೆ. ಈ ರೀತಿಯಲ್ಲಿ ರೈತರಿಗೆ ವಂಚಿಸುವ ಜಾಲದಲ್ಲಿ ಇಲಾಖೆ ಮತ್ತು ರಾಜಕಾರಣಿಗಳು ತಮ್ಮ ಪಾಲು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕೆಆರ್‍ಎಸ್ ಪಕ್ಷ ರೈತರ ನೆರವಿಗಾಗಿ ಸಹಾಯವಾಣಿಯೊಂದನ್ನು ಮಾಡಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿಯಾದರೂ ರೈತರಿಂದ ಹೆಚ್ಚಿನ ದರ ತೆಗೆದುಕೊಂಡಲ್ಲಿ ಈ ಫೋನ್ ನಂಬರಿಗೆ ತಿಳಿಸುವಂತೆ ವಿನಂತಿಸಿದೆ. ರಸಗೊಬ್ಬರದ ಮೂಲಬೆಲೆಯನ್ನು ಗಮನಿಸಿ ಎಂಆರ್‍ಪಿಯಿಂದ ಹೆಚ್ಚಿನ ದರವನ್ನು ಮಾರಾಟಗಾರರು ವಿಧಿಸಿದರೆ ಅಂತವರ ವಿರುದ್ಧ ಮಾಹಿತಿ ನೀಡಿ. ಪಕ್ಷದ ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ಮುಂದಾಗುತ್ತಾರೆ. ಆದ್ದರಿಂದ ರಸಗೊಬ್ಬರ ಮಾರಾಟದಲ್ಲಿ ನಡೆಯುವ ಅಕ್ರಮ ತಡೆಯಲು 7349577130 ಈ ನಂಬರಿಗೆ ಕರೆ ಮಾಡುವ ಮೂಲಕ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ತಿಳಿಸಿದರು.

ರಾಜ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ತಕ್ಷಣ ಪೂರೈಕೆ ಮಾಡಬೇಕು. ರಸಗೊಬ್ಬರ ಅಂಗಡಿಗಳಲ್ಲಿ ಬೆಲೆ, ದಾಸ್ತಾನು ಹಾಗೂ ತಾಲೂಕು ಸಹಾಯಕ ಕೃಷಿ ಅಧಿಕಾರಿಯ ಮೊಬೈಲ್ ನಂಬರ್ ಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಕಂಪೆನಿಗಳು ಡೀಲರ್‍ಗಳ ಮೂಲಕ ಅಂಗಡಿ ಬಾಗಿಲಿಗೆ ರಸಗೊಬ್ಬರ ಸರಬರಾಜು ಮಾಡಬೇಕು. ಲಿಂಕ್ ಪ್ರಾಡೆಕ್ಟ್ ವ್ಯವಸ್ಥೆ ನಿಲ್ಲಿಸಬೇಕು. ನಿಯಮ ಮೀರುವ ವಿತರಕರ ಲೈಸೆನ್ಸ್ ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಆರ್‍ಎಸ್ ಪಕ್ಷ ಈಗಾಗಲೇ ಕೃಷಿ ಇಲಾಖೆಯ ಆಯುಕ್ತರಿಗೆ ಮನವಿ ನೀಡಿದೆ. ಆದರೆ ಈತನಕ ಪರಿಣಾಮಕಾರಿ ಕ್ರಮಗಳು ಅಭಿವ್ಯಕ್ತಗೊಂಡಿಲ್ಲ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಅವರು ಕೃಷಿ ಇಲಾಖೆಯನ್ನು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಗೋಷ್ಟಿಯಲ್ಲಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಶಿವರಾಜ್, ಸಿಜು, ನಾಗರಾಜ್, ಸಜಿ, ಸಂಘಟನಾ ಕಾರ್ಯದರ್ಶಿಗಳಾದ ನವೀನ್ ಫೆರಾವೊ ಮತ್ತು ಶಿವ ಬೆಂಗರೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!