ಕಲುಷಿತ ನೀರು ಪೂರೈಕೆ ಆರೋಪ: ಬಟ್ಟಗುಡ್ಡೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ತುರ್ತು ಸಭೆ

ಮಂಗಳೂರು, ಜೂನ್ 20: ನಗರದ ಕೆಲವೆಡೆ ಸಾರ್ವಜನಿಕರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗಿ ಹಲವರು ಅಸ್ವಸ್ಥಗೊಂಡಿರುವ ಹಿನ್ನೆಲೆಯಲ್ಲಿ ಬಿಜೈ 31ನೇ ವಾರ್ಡಿನ ನೋಡು ಬಟ್ಟಗುಡ್ಡೆ ಪರಿಸರದ ರಾಮಕೃಷ್ಣ ಭಜನಾ ಮಂದಿರದ ಆವರಣದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ನೋಡು ಬಟ್ಟಗುಡ್ಡೆ ಪರಿಸರದ ಕೆಳಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಡ್ರೈನೇಜ್ ನೀರು ಸೇರಿಕೊಂಡು ಹಲವು ಮನೆಗಳಿಗೆ ಕಲುಷಿತ ನೀರು ಸರಬರಾಜಾಗಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.

ಸದ್ಯ ಅಧಿಕಾರಿಗಳು ನಿನ್ನೆಯಿಂದಲೇ ಸ್ಥಳೀಯ ಮನೆಗಳ ನಲ್ಲಿಗಳಿಂದ ಬರುತ್ತಿರುವ ನೀರಿನ ಮಾದರಿಗಳನ್ನು ದಿನಕ್ಕೆ ಮೂರುರಿಂದ ನಾಲ್ಕು ಬಾರಿ ಪರೀಕ್ಷೆಗೆ ಒಳಪಡಿಸುತ್ತಿದ್ದು, ಸಾರ್ವಜನಿಕರ ಸಮ್ಮುಖದಲ್ಲಿಯೇ ನೀರು ಎಲ್ಲಾ ರೀತಿಯ ಬಳಕೆಗೆ ಯೋಗ್ಯವಾಗಿದೆ ಎಂದು ದೃಢಪಡಿಸಿದ್ದಾರೆ ಎಂದು ಅವರು ಹೇಳಿದರು.

ಆದಾಗ್ಯೂ, ಈಗಾಗಲೇ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಟ್ಯಾಂಕ್‌ಗಳಲ್ಲಿ ಸಂಗ್ರಹವಾಗಿರುವ ಹಳೆಯ ನೀರನ್ನು ಸಾರ್ವಜನಿಕರು ಸಂಪೂರ್ಣವಾಗಿ ವಿಸರ್ಜಿಸಿ, ಹೊಸದಾಗಿ ಸರಬರಾಜಾಗುತ್ತಿರುವ ಶುದ್ಧ ನೀರನ್ನು ಸಂಗ್ರಹಿಸಿಕೊಳ್ಳುವಂತೆ ಶಾಸಕರು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ನೀರಿನ ಗುಣಮಟ್ಟದ ಕುರಿತು ಯಾವುದೇ ಅನುಮಾನ ಅಥವಾ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ತಮ್ಮ ಗಮನಕ್ಕೆ ಹಾಗೂ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ತಿಳಿಸಿದರು.

“ಇದು ಕುಡಿಯುವ ನೀರು ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಷಯ. ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಅಧಿಕಾರಿಗಳು ಮುಂದಿನ ಕೆಲ ದಿನಗಳವರೆಗೆ ಈ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಶಾಸಕರು ಸೂಚನೆ ನೀಡಿದರು.

ಸಭೆಯಲ್ಲಿ ಸ್ಥಳೀಯರಾದ ಪ್ರಶಾಂತ್ ಆಳ್ವ, ನಾರಾಯಣ್, ಸಂತೋಷ ಉಳ್ಳಾಲ್, ರಾಜೇಶ್ ಕಿಣಿ, ದೀಪಿಕಾ ಮನೋಜ್, ಸುಜಿತ್, ಅಶ್ವಿನ್, ಋತ್ವಿಕ್ ಕದ್ರಿ, ಅನಂತ್ ಮಲ್ಯ, ಅಶೋಕ್ ಬಂಗೇರ, ಎರೆಸ್ಟಿನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದೇ ವೇಳೆ ಪಾಲಿಕೆಯ ಎಇಇ ನಾಗರಾಜ್, ಎಇಇ ಶಿವಲಿಂಗಯ್ಯ, ಕೆಯುಐಡಿಎಫ್‌ಸಿ ಅಧಿಕಾರಿಗಳಾದ ಸುರೇಶ್, ಖಾದರ್, ಪುನೀತ್, ಮಿಥುನ್, ಜೆ.ಇ. ನಿತ್ಯಾನಂದ ಹಾಗೂ ಕುಡ್ಸೆಂಪ್‌ನ ರಿಚರ್ಡ್, ಜಯಪ್ರಕಾಶ್, ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!