ಗ್ರಾಮೀಣ ಯುವಕರಿಗೆ ಉದ್ಯೋಗದ ಸೇತು: ಆಗಸ್ಟ್ 7-8ರಂದು ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ

ಮಂಗಳೂರು, ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ 2007ರಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಇಂದು ದೇಶದ ಅತ್ಯಂತ ಯಶಸ್ವಿ ಬೃಹತ್ ಉದ್ಯೋಗ ಮೇಳಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಈ ಸಾಲಿನ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವಜನರಿಗೆ ಹಾಗೂ ಸೀಮಿತ ಉದ್ಯೋಗಾವಕಾಶಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಗುಣಮಟ್ಟದ ಉದ್ಯೋಗ ದೊರಕಿಸುವ ಉದ್ದೇಶದಿಂದ ಆರಂಭವಾದ ಈ ಕಾರ್ಯಕ್ರಮ ಇಂದು ಕರ್ನಾಟಕ ಸೇರಿದಂತೆ ನೆರೆಯ ನಾಲ್ಕು ರಾಜ್ಯಗಳ ಅಭ್ಯರ್ಥಿಗಳಿಗೆ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸುವ ವಿಶ್ವಾಸಾರ್ಹ ವೇದಿಕೆಯಾಗಿ ಬೆಳೆದಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಡಿ ಆಯೋಜಿಸಲಾಗುವ ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳು ಹಾಗೂ ಭಾಗವಹಿಸುವ ಕಂಪನಿಗಳಿಗೆ ಸಂಪೂರ್ಣ ಉಚಿತವಾಗಿದೆ. ಇದುವರೆಗೆ ಪ್ರತಿಷ್ಠಾನವು 22 ಬೃಹತ್ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಪ್ರತಿಯೊಂದು ಆವೃತ್ತಿಯಲ್ಲೂ ಸರಾಸರಿ 250ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿವೆ. ಒಟ್ಟು 66,432 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 40,848 ಅಭ್ಯರ್ಥಿಗಳು ಸ್ಥಳದಲ್ಲಿಯೇ ಉದ್ಯೋಗದ ಆಫರ್ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

300ಕ್ಕೂ ಹೆಚ್ಚು ಕಂಪನಿಗಳ ಭಾಗವಹಿಸುವಿಕೆ

ಈ ಬಾರಿಯ ಆಳ್ವಾಸ್ ಪ್ರಗತಿ-2026ರಲ್ಲಿ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬ್ಯಾಂಕಿಂಗ್ ಮತ್ತು ಹಣಕಾಸು, ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಔಷಧೋದ್ಯಮ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ದೂರಸಂಪರ್ಕ, ಆರೋಗ್ಯ, ಮಾಧ್ಯಮ, ನಿರ್ಮಾಣ, ಎಲೆಕ್ಟ್ರಾನಿಕ್ಸ್, ಶಿಕ್ಷಣ ಹಾಗೂ ಎನ್‌ಜಿಒ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ನಡೆಸಲಿವೆ.

ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಎಂಜಿನಿಯರಿಂಗ್, ಕಲಾ, ವಾಣಿಜ್ಯ, ನಿರ್ವಹಣೆ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೊಮಾ, ಕೌಶಲ್ಯಾಧಾರಿತ ವೃತ್ತಿಗಳು, ಪಿಯುಸಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಾವಿರಾರು ಉದ್ಯೋಗಾವಕಾಶಗಳು ಲಭ್ಯವಿರಲಿವೆ.

ಆನ್‌ಲೈನ್ ನೋಂದಣಿ ಕಡ್ಡಾಯ

ಭಾಗವಹಿಸುವ ಕಂಪನಿಗಳ ವಿವರಗಳನ್ನು www.alvaspragati.com ವೆಬ್‌ಸೈಟ್‌ನಲ್ಲಿ ನಿರಂತರವಾಗಿ ನವೀಕರಿಸಲಾಗುವುದು. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.

ಅಭ್ಯರ್ಥಿಗಳಿಗೆ ಪ್ರಮುಖ ಮಾಹಿತಿ

ಆಗಸ್ಟ್ 6ರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆ.
ಐಟಿಐ ಅಭ್ಯರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ.
ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಸಿರಬೇಕು.
ಅಭ್ಯರ್ಥಿಗಳು ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಹಾಜರಿರಬೇಕು.

ತರಬೇಕಾದ ದಾಖಲೆಗಳು

5ರಿಂದ 10 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
ನವೀಕರಿಸಿದ ಬಯೋಡೇಟಾ/ರೆಸ್ಯೂಮ್
ಎಲ್ಲಾ ಅಂಕಪಟ್ಟಿಗಳ ದೃಢೀಕೃತ ಜೆರಾಕ್ಸ್ ಪ್ರತಿಗಳು
ಆನ್‌ಲೈನ್ ನೋಂದಣಿ ಸಂಖ್ಯೆ ಅಥವಾ ಐಡಿ ಸಂಖ್ಯೆ

ಹೆಚ್ಚಿನ ಮಾಹಿತಿಗಾಗಿ 9741440490, 9611750531 ಹಾಗೂ 7975223865 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ, ನೇಮಕಾತಿ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!