ಮಂಗಳೂರು, ಜೂ. 25: ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಏಪ್ರಿಲ್ 23ರಂದು ಸಂಜೆ ಸುಮಾರು 4 ಗಂಟೆಯ ವೇಳೆಗೆ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ, “ನಾನು ಒಂದು ತಪ್ಪು ಮಾಡಿದ್ದೇನೆ. ಅವನು ಈಗ ಸಂತೋಷವಾಗಿದ್ದಾನೆ. ಅವನು ಹಿಂದೂ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರೂ ನನಗೆ ಯಾವುದೇ ಸಹಾಯ ದೊರೆಯಲಿಲ್ಲ” ಎಂದು ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಅದೇ ದಿನ ರಾತ್ರಿ ಸುಮಾರು 11 ಗಂಟೆಗೆ ಬಾಲಕಿಯ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಮೃತ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯ ಆತ್ಮಹತ್ಯೆಗೆ ಯುವಕನೇ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ತಡರಾತ್ರಿ ಸುಮಾರು 1 ಗಂಟೆಗೆ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಡಿಎನ್‌ಎ ಪರೀಕ್ಷೆಗಾಗಿ ವೈದ್ಯರು ಭ್ರೂಣದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಆರೋಪಿಯ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.