ಮಂಗಳೂರು, ಜೂ.25: ರಾಜ್ಯದಲ್ಲಿ ಈಡಿಗ-ಬಿಲ್ಲವ ಸೇರಿದಂತೆ 26 ಪಂಗಡಗಳ ಪ್ರತಿನಿಧಿತ್ವ ಹೊಂದಿರುವ ಸಮಾಜಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದಲ್ಲಿ ಸಮಾಜದ ಪ್ರತಿನಿಧಿತ್ವ ಕೇವಲ ಒಬ್ಬ ಸಚಿವರಿಗೆ ಸೀಮಿತವಾಗಿದ್ದು, ಉಳಿದಿರುವ ಸರ್ಕಾರದ ಅವಧಿಯಲ್ಲಿ ಮತ್ತೊಬ್ಬರಿಗೆ ಸಚಿವ ಸ್ಥಾನ ನೀಡಿ ಕನಿಷ್ಠ ಇಬ್ಬರು ಸಚಿವರ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಒತ್ತಾಯಿಸಿದರು.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ವಾರ್ಷಿಕ 500 ಕೋಟಿ ರೂ. ಅನುದಾನ ನೀಡುವ ಭರವಸೆ ಈಡೇರಿಲ್ಲ ಎಂದು ಆರೋಪಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,500 ಕೋಟಿ ರೂ. ಅನುದಾನ ದೊರೆಯಬೇಕಾಗಿದ್ದರೂ ಬಿಡುಗಡೆಯಾಗಿಲ್ಲ ಎಂದರು. ಇದರಿಂದ ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.
ಮುಂದಿನ ಆರು ತಿಂಗಳೊಳಗೆ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂದೀಪ್ ಪಂಪ್‌ವೆಲ್, ಎಂ.ಕೆ. ಪ್ರಸಾದ್, ದಿನೇಶ್ ಕುಮಾರ್ ರೈ, ಲಕ್ಷ್ಮೀಶ್ ಸುವರ್ಣ, ನವೀನ್ ಕೋಟ್ಯಾನ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.