ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲಾ ವಿಭಾಗದ ಕೆಲವು ವಿಷಯ ಸಂಯೋಜನೆಗಳನ್ನು 2026-27ನೇ ಶೈಕ್ಷಣಿಕ ವರ್ಷದಿಂದ ಸ್ಥಗಿತಗೊಳಿಸಲು ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿದೆ.
ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಈ ವಿಷಯ ತಿಳಿಸಿದರು.
ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ–ಇತಿಹಾಸ–ಸಮಾಜಶಾಸ್ತ್ರ ಹಾಗೂ ಇತಿಹಾಸ–ಪತ್ರಿಕೋದ್ಯಮ–ಕನ್ನಡ, ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ–ಕನ್ನಡ–ಸಮಾಜಶಾಸ್ತ್ರ ಮತ್ತು ಉಡುಪಿಯ ಅಜ್ಜರಕಾಡು ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್–ಇತಿಹಾಸ–ರಾಜಕೀಯ ವಿಜ್ಞಾನ ವಿಷಯ ಸಂಯೋಜನೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶ ನೀಡಿದೆ ಎಂದು ಅವರು ಹೇಳಿದರು.

ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಬಿಎ ಕೋರ್ಸ್‌ಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿರುವುದಾಗಿ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೊ. ಕೆ.ಆರ್. ಕವಿತಾ ಮಾತನಾಡಿ, ಕಲಾ ವಿಭಾಗದಲ್ಲಿ ಕನಿಷ್ಠ 15 ಹಾಗೂ ವಿಜ್ಞಾನ ವಿಭಾಗದಲ್ಲಿ 10 ವಿದ್ಯಾರ್ಥಿಗಳ ದಾಖಲಾತಿ ಕಡ್ಡಾಯವಾಗಿದ್ದು, ಬೇಡಿಕೆ ಇಲ್ಲದ ಕೋರ್ಸ್‌ಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಯಾಗಲಿರುವ ‘ಸ್ಕೂಲ್ ಸಿಸ್ಟಮ್’ ಮಾದರಿ, ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯುಎಸಿ) ಕರಡು ಪರಿನಿಯಮ ಹಾಗೂ ಸೇಂಟ್ ಆಗ್ನಸ್ ಶಿಕ್ಷಣ ಸಂಸ್ಥೆಯ ಸ್ವಾಯತ್ತ ಸ್ಥಾನಮಾನವನ್ನು 2030-31ರವರೆಗೆ ಮುಂದುವರಿಸುವ ಪ್ರಸ್ತಾವನೆಗೂ ಅನುಮೋದನೆ ನೀಡಲಾಯಿತು.


