ಕಾಸರಗೋಡು: ಗಡಿನಾಡಿನ ಹಿರಿಯ ಯಕ್ಷಗಾನ ಪ್ರಸಂಗಕರ್ತ, ಅರ್ಥಧಾರಿ ಹಾಗೂ ನಿವೃತ್ತ ಮಾರಾಟ ತೆರಿಗೆ ಅಧಿಕಾರಿ ಮಧೂರು ವೆಂಕಟಕೃಷ್ಣ (87) ಸೋಮವಾರ ಸಂಜೆ ವಯೋಸಹಜ ಅನಾರೋಗ್ಯದಿಂದ ಮಧೂರಿನ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಸುಮಿತ್ರಾ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕಾಸರಗೋಡು ಮಾರಾಟ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು, ಉಳಿಯ ಧನ್ವಂತರಿ ಯಕ್ಷಗಾನ ಸಂಘದ ಮೂಲಕ ಅರ್ಥಧಾರಿ, ವೇಷಧಾರಿ ಹಾಗೂ ಪ್ರಸಂಗಕರ್ತರಾಗಿ ವಿಶಿಷ್ಟ ಹೆಸರು ಗಳಿಸಿದ್ದರು. ತೆಂಕಣ ಯಕ್ಷಗಾನದ ದಂತಕಥೆ ಕೂಡ್ಲು ನಾರಾಯಣ ಬಲ್ಯಾಯ ಅವರ ಶಿಷ್ಯರಾಗಿದ್ದ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದರು.
‘ಮಧೂರು ಕ್ಷೇತ್ರ ಮಹಾತ್ಮೆ’, ‘ವೈಶಾಲಿನಿ ಪರಿಣಯ’, ‘ಧನ್ವಂತರಿ ಮಹಾತ್ಮೆ’, ‘ನದಿಯಾಗಿ ಹರಿದ ನಂದಿನಿ’, ‘ದುಂಬಿಯಾಗಿ ನೆಗೆದ ಭ್ರಾಮರಿ’ ಸೇರಿದಂತೆ ಅನೇಕ ಪ್ರಸಂಗಗಳನ್ನು ರಚಿಸಿದ್ದ ಅವರ ಕೃತಿಗಳು ಯಕ್ಷಗಾನ ಮೇಳಗಳು ಹಾಗೂ ತಾಳಮದ್ದಳೆಗಳಲ್ಲಿ ಅಪಾರ ಜನಪ್ರಿಯತೆ ಪಡೆದಿವೆ.
ಶಿವಳ್ಳಿ ಧ್ವನಿ ಪತ್ರಿಕೆಯ ಮಾಜಿ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಕಾಸರಗೋಡಿನ ಶಿವಳ್ಳಿ ಮಹಾಸಭೆ ಸೇರಿದಂತೆ ಯಕ್ಷಗಾನ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


