ಮಂಗಳೂರು: ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಮಂಗಳೂರು ವಲಯದ ವತಿಯಿಂದ ಪ್ರಥಮ ಸಿಐಐ ಮಂಗಳೂರು ಆರೋಗ್ಯ ಶೃಂಗಸಭೆ-2026 ಜುಲೈ 11ರಂದು ಬೆಳಿಗ್ಗೆ 10 ಗಂಟೆಗೆ ನಗರದ ಅವತಾರ್ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಸಿಐಐ ಮಂಗಳೂರು ಅಧ್ಯಕ್ಷ ಅಭಿನವ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರಾವಳಿ ಕರ್ನಾಟಕವನ್ನು ಜಾಗತಿಕ ಆರೋಗ್ಯ ಸೇವಾ ಗಮ್ಯಸ್ಥಾನವಾಗಿ ರೂಪಿಸುವುದು” ಎಂಬ ಧ್ಯೇಯದೊಂದಿಗೆ ಶೃಂಗಸಭೆ ಆಯೋಜಿಸಲಾಗಿದೆ. ಆರೋಗ್ಯ ಕ್ಷೇತ್ರದ ತಜ್ಞರು, ಆಸ್ಪತ್ರೆಗಳ ಆಡಳಿತ ಮಂಡಳಿಗಳು, ನೀತಿ ನಿರ್ಧಾರಕರು, ವೈದ್ಯರು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ತಂತ್ರಜ್ಞಾನ ಸಂಸ್ಥೆಗಳು ಹಾಗೂ ಹೂಡಿಕೆದಾರರು ಭಾಗವಹಿಸಿ ಆರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ ಎಂದರು.

ಶೃಂಗಸಭೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಫರೀದ್ ಉದ್ಘಾಟಿಸಲಿದ್ದು, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಕುಲಪತಿ ಡಾ. ಕೆ. ಶರತ್ ರಾವ್ ಹಾಗೂ ಕಾವೇರಿ ಆಸ್ಪತ್ರೆಗಳ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ್ ಭಾಸ್ಕರನ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಿಐಐ ಮಂಗಳೂರು ಪದಾಧಿಕಾರಿಗಳಾದ ಗೌರವ್ ಹೆಗ್ಡೆ, ಅಜ್ಮಲ್, ಪ್ರಮೋದ್ ಹಾಗೂ ರೂಪಶ್ರೀ ಉಪಸ್ಥಿತರಿದ್ದರು.


