ಕಾಸರಗೋಡು | ಜು. 9: ಅಬಕಾರಿ ಇಲಾಖೆ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ, ಮಾದಕವಸ್ತು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ತಾಲೂಕಿನ ಚಂಗಲ ಗ್ರಾಮದ ಸಂತೋಷ್ ನಗರದಲ್ಲಿ ಕಾರಿನಲ್ಲಿ 1.899 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದ ವೇಳೆ ಆರೋಪಿಗಳಾದ ಅಬ್ದುಲ್ ರೌಫ್, ಕೌಶಿಕ್ ಹಾಗೂ ಮುಹಮ್ಮದ್ ಜಸೀರ್ ಅವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಕಾಸರಗೋಡು ಅಬಕಾರಿ ನಿರೀಕ್ಷಕ ಅಶ್ವಿನ್ ಟಿ.ಕೆ. ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಾದಕವಸ್ತು ಸಾಗಾಟಕ್ಕೆ ಬಳಸಿದ್ದ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಅನೀಶ್ ಕುಮಾರ್, ಅಭಿಲಾಷ್ ಕೆ., ಅಬ್ದುಲ್ ಅಜೀಜ್, ಲಿಜಿನ್ ಆರ್., ಶಮ್ಸುದ್ದೀನ್ ಹಾಗೂ ಅಶ್ವಿನ್ ಎನ್.ವಿ. ಭಾಗವಹಿಸಿದ್ದರು.


