ಮಂಗಳೂರು ಮಿತ್ರ ಮಂಡಳಿ -2.0 ಜುಲೈ 18 ರಂದು ಉದ್ಘಾಟನೆ

1920 ರ ಕಾಲಘಟ್ಟದಲ್ಲಿ ಕರಾವಳಿ ಕರ್ನಾಟಕವೂ ಸೇರಿದಂತೆ ಇಡೀ ರಾಷ್ಟ್ರವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ರಾಷ್ಟ್ರೀಯತೆ ಎನ್ನುವುದು ಸಾಹಿತ್ಯದ ಮುಖ್ಯ ತಿರುಳಾಗಿ ಸಾಹಿತಿಗಳ ಲೇಖನದಿಂದ ಹೊರಹೊಮ್ಮುತ್ತಿದ್ದ ಕಾಲ. ಈ ಹಂತದಲ್ಲಿ ಕನ್ನಡ ಭಾಷೆಯ ಮೂಲಕ ರಾಷ್ಟ್ರೀಯತೆಯ ಭಾವವನ್ನು ಹರಡಿಸಲು ಕರಾವಳಿಯ ಕನ್ನಡ ಪಂಡಿತರು ದೃಢವಾದ ಹೆಜ್ಜೆಯನ್ನು ಇಟ್ಟಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲಿನ ಮರದಡಿಯಲ್ಲಿ ಸಮಾನ ಮನಸ್ಕ ಸಾಹಿತಿಗಳು ಸೇರಿ ಚಿಂತನೆ ನಡೆಸಿ, ಕನ್ನಡ ಸಾಹಿತ್ಯ ಲೋಕದಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದರು.. ಅವರಿಗೆಲ್ಲಾ ವೇದಿಕೆಯಾಗಿ 1928 ರಲ್ಲಿ ಜನ್ಮ ತಾಳಿದ್ದೇ ಮಂಗಳೂರು ಮಿತ್ರ ಮಂಡಳಿ.


ಶ್ರೀ ಪಂಜೆ ಮಂಗೇಶ್ ರಾವ್, ಶ್ರೀ ಎಂ.ಎನ್. ಕಾಮತ್, ಶ್ರೀ ಮಂಜೇಶ್ವರ ಗೋವಿಂದ ಪೈ, ಶ್ರೀ ಜೋಡುಮಠ ವಾಮನ ಭಟ್, ಶ್ರೀ ಪೇಜಾವರ ಸದಾಶಿವ ರಾವ್, ಶ್ರೀ ಸೇಡಿಯಾಪು ಕೃಷ್ಣ ಭಟ್, ಶ್ರೀ ಕಡೆಂಗೋಡ್ಲು ಶಂಕರ್ ಭಟ್, ಶ್ರೀ ಮುಳಿಯ ತಿಮ್ಮಪ್ಪಯ್ಯ, ಶ್ರೀ ಕಯ್ಯಾರ ಕಿಞ್ಞಣ್ಣ ರೈ, ಶ್ರೀ ಕೆ. ಸೂರ್ಯನಾರಾಯಣ ಅಡಿಗ, ಶ್ರೀ ಕಣಂದೂರು ರಾಘವಾಚಾರ್, ಶ್ರೀ ಕಣಂದೂರು ತಿಮ್ಮಯಾಚಾರ್, ಶ್ರೀ ಅಮ್ಮೆಂಬಳ ನಾರಾಯಣ ಪೈ, ಶ್ರೀ ಕೆ.ಕೆ.ರೈ, ಶ್ರೀ ಬಾಬುರಾಯ್ ಪ್ರಭು, ಶ್ರೀ ಎಸ್.ಪಿ.ಭಟ್, ಶ್ರೀ ಎ ನಾರಾಯಣ ಪೈ ಹಾಗೂ ಅನೇಕ ಧೀಮಂತ ಸಾಹಿತಿಗಳು ಕ್ರಿಯಾಶೀಲವಾಗಿ ರೂಪುಗೊಳಿಸಿದ, ಸಾಹಿತ್ಯ ಸೃಷ್ಟಿಯ – ಸಾಹಿತ್ಯ ಪ್ರಸಾರದ ವೇದಿಕೆಯಾಗಿ ” ಮಂಗಳೂರು ಮಿತ್ರ ಮಂಡಳಿ” ಕರಾವಳಿಯ ಸಾಹಿತ್ಯ ಲೋಕದಲ್ಲಿ ಇತಿಹಾಸ ಸೃಷ್ಟಿಸಿತ್ತು.

ಮಂಗಳೂರು ಮಿತ್ರ ಮಂಡಳಿಯನ್ನು ಪುನರುಜ್ಜೀವನಗೊಳಿಸಿ, ಮತ್ತೇ ಮುನ್ನಲೆಗೆ ತರಲು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಇದರ ಕಲ್ಚರಲ್ ಅಕಾಡೆಮಿಯ ವತಿಯಿಂದ ನಿರ್ಧರಿಸಲಾಗಿದೆ. ಮಂಗಳೂರು ಮಿತ್ರ ಮಂಡಳಿಯ ಮೂಲಕ ನವಚಿಂತನೆಯ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ, ವಿವಿಧ ಸಾಹಿತ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಹಕರಿಸುವ, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಲಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಜುಲೈ 18 ರಂದು ಸಂಜೆ 5 ಗಂಟೆಗೆ ಡೊಂಗರಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ಜರುಗಲಿದೆ. ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರಧಾನ ಭಾಷಣ ಮಾಡಲಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!