ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಹತ್ವದ ಯಶಸ್ಸು ಸಾಧಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಶಾದ್ (32) ಅವರನ್ನು ಬೆಂಗಳೂರಿನಲ್ಲಿ ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೌಡ್ಲಿ ಕಾನ್ವೆಂಟ್ ರೋಡ್ ನಿವಾಸಿ ಅಬ್ದುಲ್ ನಾಸಿರ್ (41) ಅವರನ್ನು ಕೇರಳದ ಕೊಚ್ಚಿಯಲ್ಲಿ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೊಲೆ ಕೃತ್ಯ ಎಸಗಿದ್ದ ಪ್ರಮುಖ ಆರೋಪಿಗಳಿಗೆ ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಈರೋಡ್‌ನಲ್ಲಿ ಆಶ್ರಯ ಮತ್ತು ತಲೆಮರೆಸಿಕೊಳ್ಳಲು ನೆರವು ನೀಡಿದ ಆರೋಪ ಇವರ ಮೇಲಿದೆ.

ಪ್ರಕರಣದಲ್ಲಿ ಒಟ್ಟು 27 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದ್ದು, ತನಿಖೆಯ ವೇಳೆ ಎನ್‌ಐಎ ಅಧಿಕಾರಿಗಳು ಬಹುತೇಕ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಆರು ಮಂದಿ ದೀರ್ಘಕಾಲ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರ ಸುಳಿವು ನೀಡುವವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು.

ಈ ಮಧ್ಯೆ, ಸೋಮವಾರಪೇಟೆ ಹಾನಗಲ್ಲು ನಿವಾಸಿ ಮತ್ತೋರ್ವ ಆರೋಪಿ ಅಬ್ದುಲ್ ನಾಸಿರ್ (24) ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಗಳ ವಿರುದ್ಧ ತನಿಖೆಯನ್ನು ಮುಂದುವರಿಸಿದ್ದ ಎನ್‌ಐಎ, 2025ರ ಏಪ್ರಿಲ್‌ನಲ್ಲಿ ನಾಲ್ವರು ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!