ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ (SAF) ಸ್ಥಾಪಿಸಿರುವ ಉದ್ದೇಶವನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸಮಾಜ ಸೇವಕಿ ಅನುಪಮ ಶೆಣೈ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ವರ್ಷ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆ (SAF) ರಚಿಸಲಾಗಿತ್ತು. ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಎಂದು ಹೇಳಿ, ಅರಣ್ಯ ನಕ್ಸಲ್ ಪಡೆ (ANF) ಸಿಬ್ಬಂದಿಯನ್ನು ಕಡಿತಗೊಳಿಸಿ SAF ರಚಿಸಿರುವ ಸರ್ಕಾರ, ಈ ಪಡೆಯ ಸ್ಥಾಪನೆಗೆ ಯಾವ ಕಾನೂನು ಆಧಾರವಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಕರಾವಳಿಯ ಜನರು ಕಾಂಗ್ರೆಸ್ಗೆ ಮತ ಹಾಕುವುದಿಲ್ಲ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು. ಈಗ ಮುಖ್ಯಮಂತ್ರಿಯಾಗಿರುವ ಅವರು, ಕರಾವಳಿಗೆ SAF ಅನ್ನು ಯಾವ ಉದ್ದೇಶದಿಂದ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.
ಚಿನ್ನಯ್ಯ ಶರಣಾದ ಬಳಿಕ “ಬುರುಡೆ ಗ್ಯಾಂಗ್” ಪ್ರಕರಣ ಬಹುತೇಕ ಅಂತ್ಯಗೊಂಡಿದೆ. ಆದರೂ ಕರಾವಳಿಯಲ್ಲಿ SAF ಅನ್ನು ಮುಂದುವರಿಸಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ವಿಶೇಷ ತನಿಖಾ ತಂಡ (SIT) ತನಿಖೆಗಾಗಿ ಮತ್ತು ವಿಶೇಷ ಕಾರ್ಯಪಡೆ (SAF) ರಕ್ಷಣೆಗಾಗಿ ಸ್ಥಾಪಿಸಲಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

SAF ಅನ್ನು ಮುಂದುವರಿಸುವ ಬದಲು ಅದನ್ನು ರದ್ದುಗೊಳಿಸಿದರೆ ಸರ್ಕಾರಕ್ಕೆ ಆರ್ಥಿಕ ಉಳಿತಾಯವಾಗಲಿದ್ದು, ಆ ಹಣವನ್ನು ಜನಪರ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸಬಹುದು. SAF ಸ್ಥಾಪನೆಗೆ ಇರುವ ಕಾನೂನು ಆಧಾರವನ್ನು ಸರ್ಕಾರ ಬಹಿರಂಗಪಡಿಸಬೇಕು. ಇಲ್ಲವಾದಲ್ಲಿ ಈ ಪಡೆಯ ಅಗತ್ಯವನ್ನು ಮರುಪರಿಶೀಲಿಸಿ ರದ್ದುಗೊಳಿಸಬೇಕು ಎಂದು ಅನುಪಮ ಶೆಣೈ ಆಗ್ರಹಿಸಿದ್ದಾರೆ.

