ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಅಧಿಕಾರ ಸ್ವೀಕಾರ

ಮಂಗಳೂರು, ಜು.22: ತ್ಯಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದಿಂದ ತೆರವಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಹುದ್ದೆಗೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.

1966ರ ಮೇ 2ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್‌ನಲ್ಲಿ ಜನಿಸಿದ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ತಂಙಳ್ ಅವರು ಓತುಪಲ್ಲಿಯಲ್ಲಿ ಪ್ರಾಥಮಿಕ ಧಾರ್ಮಿಕ ಶಿಕ್ಷಣ ಆರಂಭಿಸಿ, ಬಳಿಕ ಪಲ್ಲಿದರ್ಸ್‌ನಲ್ಲಿ 13 ವರ್ಷಗಳ ಕಾಲ ಇಸ್ಲಾಮಿಕ್ ಶಿಕ್ಷಣ ಪಡೆದರು. ಪ್ರವಾದಿ ಮುಹಮ್ಮದ್ (ಸ) ಅವರ ಕುಟುಂಬ ಪರಂಪರೆಯ ಯಮನಿ ಸೈಯ್ಯದ್ ವಂಶಕ್ಕೆ ಸೇರಿದ ಅವರು, ಸನದು (ಬಿರುದು) ಪಡೆದ ಬಳಿಕ ಹಲವು ಮಸೀದಿಗಳು ಹಾಗೂ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದಾರೆ.

ತಂದೆಯ ನಿಧನದ ಬಳಿಕ ಅಂಡಮಾನ್ ದ್ವೀಪಗಳಲ್ಲಿ ಖಾಝಿಯಾಗಿ ಜವಾಬ್ದಾರಿ ವಹಿಸಿಕೊಂಡ ಅವರು, 2009ರಲ್ಲಿ ಕಲ್ಲಿಕೋಟೆಯ ಗ್ರ್ಯಾಂಡ್ ಖಾಝಿಯಾಗಿ ನೇಮಕಗೊಂಡಿದ್ದರು. ಪ್ರಸ್ತುತ ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ 370ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದಲ್ಲದೆ, ವಯನಾಡಿನ ಇಮಾಮ್ ಗಝಾಲಿ ಅಕಾಡೆಮಿ ಹಾಗೂ ರಶೀದಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿರುವ ಅವರು, ಸೈನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಲೀಡರ್‌ಶಿಪ್‌ನ ಪೋಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಲಪ್ಪುರಂ ಸುನ್ನಿ ಮಹಲ್ಸ್ ಫೆಡರೇಶನ್ ಹಾಗೂ ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷರಾಗಿದ್ದು, ಕೇರಳ ರಾಜ್ಯ ಸುನ್ನಿ ಯುವಜನ ಸಂಘದ ಸದಸ್ಯರು ಮತ್ತು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತಿರೂರಚ್ಯಾಡಿ ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಸಯ್ಯದುಲ್ ಉಮ್ಮ ಸ್ವಾಧಿಕ್ ಅಲಿ ಶಿಹಾಬ್ ತಂಙಳ್, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಕೋಶಾಧಿಕಾರಿ ಕೊಯ್ಯೋಡು ಉಮ್ಮರ್ ಮುಸ್ಲಿಯಾರ್, ಸೈಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಙಳ್, ಸೈಯ್ಯದ್ ಹಮೀದ್ ಅಲಿ ಶಿಹಾಬ್ ತಂಙಳ್, ಸೈಯ್ಯದ್ ಆಟಕೋಯ ಕುಂಬೋಳ್ ತಂಙಳ್, ಸೈಯ್ಯದ್ ಅಲಿ ತಂಙಳ್ ಕುಂಬೋಳ್, ಲಕ್ಷದ್ವೀಪ ಖಾಝಿ ಇ.ಪಿ. ಸೈದಾಲಿ ತಂಬಳ್, ಸೈಯ್ಯದ್ ಝನುಲ್ ಅಬಿದೀನ್ ತಂಬಳ್, ಉಸ್ಮಾನುಲ್ ಫೈಝಿ ತೋಡಾರ್, ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ್, ಅಬ್ದುಲ್ ಸಮದ್ ಪೂಕೋಟೂರು, ಮಾಜಿ ಮೇಯರ್ ಕೆ. ಅಶ್ರಫ್ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!