ಮಂಗಳೂರು:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರಂದು ನಗರದ ಕದ್ರಿ ಹಿಲ್ಸ್ನಲ್ಲಿರುವ ಯುದ್ಧ ಸ್ಮಾರಕದಲ್ಲಿ 1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ T-55 ಬ್ಯಾಟಲ್ ಟ್ಯಾಂಕ್ನ ಅನಾವರಣ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಪುಷ್ಪನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ (ಐಎಎಫ್) ವೆಟರನ್ ಶ್ರೀಕಾಂತ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಅತಿಕ್ರಮಣ ಪ್ರಯತ್ನವನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಐತಿಹಾಸಿಕ ವಿಜಯ ಸಾಧಿಸಿತು. ಈ ಯುದ್ಧದಲ್ಲಿ 527 ಯೋಧರು ವೀರಮರಣ ಹೊಂದಿದ್ದು, 1,363ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದರು. ಅವರ ಶೌರ್ಯ, ತ್ಯಾಗ ಹಾಗೂ ದೇಶಪ್ರೇಮವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ಟ್ಯಾಂಕ್ಗಾಗಿ ನಿರ್ಮಿಸಲಾದ ವಿಶೇಷ ಪೀಠದ ಮೇಲೆ ಈಗಾಗಲೇ ಅದನ್ನು ಪ್ರತಿಷ್ಠಾಪಿಸಲಾಗಿದೆ. ಅನಾವರಣದ ಬಳಿಕ ಸಾರ್ವಜನಿಕರಿಗೆ ಟ್ಯಾಂಕ್ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.ಈ ಬಾರಿಯ ಆಚರಣೆಯ ಅಂಗವಾಗಿ ಮಂಗಳೂರಿಗೆ ತರಲಾಗಿರುವ T-55 ಯುದ್ಧ ಟ್ಯಾಂಕ್ ಅನ್ನು ಬೆಳಿಗ್ಗೆ 9.15ಕ್ಕೆ ಅನಾವರಣಗೊಳಿಸಲಾಗುವುದು. ಟ್ಯಾಂಕ್ ಅನ್ನು ಮಂಗಳೂರಿಗೆ ತರಲು ಸಂಸದ ಹಾಗೂ ಮಾಜಿ ಸೇನಾ ಅಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಪ್ರಯತ್ನ ಮತ್ತು ಮುತುವರ್ಜಿಯಿದೆ ಎಂದು ಅವರು ತಿಳಿಸಿದರು.

ಬಳಿಕ ಬೆಳಿಗ್ಗೆ 9.30ಕ್ಕೆ ಕದ್ರಿ ಹಿಲ್ಸ್ನ ಯುದ್ಧ ಸ್ಮಾರಕದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಪುಷ್ಪನಮನ ಸಲ್ಲಿಸಲಾಗುವುದು. ಕಾರ್ಗಿಲ್ ಯುದ್ಧ ಸೇರಿದಂತೆ ದೇಶರಕ್ಷಣೆಯಲ್ಲಿ ಬಲಿದಾನಗೈದ ಎಲ್ಲ ಯೋಧರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಗೌರವ ಸಲ್ಲಿಸಲಾಗುವುದು ಎಂದು ಹೇಳಿದರು.ವಿದ್ಯಾರ್ಥಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು ಎಂದು ಬರೆದರೆ ಇನ್ನೂ ಉತ್ತಮ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ನಿವೃತ್ತ ನೌಕಾಪಡೆಯ ವೆಟರನ್ ಸುಧೀರ್ ಪೈ ಹಾಗೂ ಸಂಘದ ಉಪಾಧ್ಯಕ್ಷ ಕರ್ನಲ್ ಎ.ಕೆ. ಜಯಚಂದ್ರನ್ ಉಪಸ್ಥಿತರಿದ್ದರು.


