ಬಂಟ್ವಾಳ: ವಿದ್ಯುತ್ ಕಾಮಗಾರಿ ವೇಳೆ ಮೃತಪಟ್ಟ ಯುವಕನ ಕುಟುಂಬಕ್ಕೆ ಏಳು ತಿಂಗಳು ಕಳೆದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ ಆರೋಪಿಸಿದರು.

ಬಿ.ಸಿ.ರೋಡ್‌ನ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿ, ಕಾವಳಮುಡೂರು ಗ್ರಾಮದ ಅಕ್ಬರ್ ಆಲಿ ಮೃತಪಟ್ಟ ಪ್ರಕರಣದಲ್ಲಿ ಕುಟುಂಬ ಇನ್ನೂ ಸಂಕಷ್ಟದಲ್ಲಿದ್ದು, ಮಾನವೀಯ ನೆಲೆಯಲ್ಲಿ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್, ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್ ವರದಿಯ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ವರದಿ ಕುರಿತು ಆಕ್ಷೇಪವಿದ್ದರೆ ಸಂಬಂಧಿಸಿದ ಕಚೇರಿಗೆ ದೂರು ಸಲ್ಲಿಸಬಹುದು ಎಂದು ತಿಳಿಸಿದರು. ಇದೇ ವೇಳೆ ಗುತ್ತಿಗೆದಾರರ ಪರವಾಗಿ ಮಾತನಾಡಿದ ಪ್ರತಿನಿಧಿಯೊಬ್ಬರು, ಪರಿಹಾರ ನೀಡಲು ಮುಂದಾಗಿದ್ದರೂ ಕುಟುಂಬ ಅದನ್ನು ಸ್ವೀಕರಿಸಿರಲಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳಿಗೆ ಸುತ್ತಿಕೊಂಡಿರುವ ಬಳ್ಳಿಗಳ ತೆರವು, ಅಪಾಯಕಾರಿ ಮರಗಳ ತೆರವು, ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆ, ವೋಲ್ಟೇಜ್ ಸಮಸ್ಯೆ ಹಾಗೂ ರಸ್ತೆ ಬದಿಯ ಅಪಾಯಕಾರಿ ವಿದ್ಯುತ್ ಕಂಬ ತೆರವು ಸೇರಿದಂತೆ ಹಲವು ಸಾರ್ವಜನಿಕ ಸಮಸ್ಯೆಗಳು ಪ್ರಸ್ತಾಪಗೊಂಡವು.
ಇದೇ ವೇಳೆ ಗೃಹಜ್ಯೋತಿ ಯೋಜನೆ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಆಗಸ್ಟ್ 31ರವರೆಗೆ ಮನೆಮನೆಗೆ ಸಮೀಕ್ಷೆ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು.


