ರೋಹನ್ ಕಾರ್ಪೊರೇಷನ್‌ನಿಂದ ‘ದಿ ಗ್ರಾಟಿಟ್ಯೂಡ್ ಗ್ಯಾದರಿಂಗ್’; 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಮಂಗಳೂರು, ಜು. 25: ನಗರದ ಪ್ರತಿಷ್ಠಿತ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ವತಿಯಿಂದ ‘ದಿ ಗ್ರಾಟಿಟ್ಯೂಡ್ ಗ್ಯಾದರಿಂಗ್’ (The Gratitude Gathering) ಹೆಸರಿನ ವಿಶೇಷ ಕೃತಜ್ಞತಾ ಸಮಾರಂಭವು ನಗರದ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ, ನಿರ್ದೇಶಕ ಶಿವಧ್ವಜ್ ಶೆಟ್ಟಿ, ನಿರ್ಮಾಪಕ ಪ್ರಶಾಂತ್ ರೈ, ಡಾ. ಪ್ರದೀಪ್ ಕೆಂಚನೂರು ಹಾಗೂ ಬಾಲನಟ ಆತೀಶ್ ಎಸ್. ಶೆಟ್ಟಿ ಅವರನ್ನು ರೋಹನ್ ಕಾರ್ಪೊರೇಷನ್ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಶಿವಧ್ವಜ್ ಶೆಟ್ಟಿ, ರೋಹನ್ ಕಾರ್ಪೊರೇಷನ್ ನಿರಂತರವಾಗಿ ಸಿನಿಮಾ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವುದನ್ನು ಶ್ಲಾಘಿಸಿದರು. ಇಂತಹ ಗೌರವಗಳು ಕಲಾವಿದರಿಗೆ ಪ್ರೇರಣೆಯಾಗುತ್ತವೆ. ಕರ್ನಾಟಕ ಮತ್ತು ಕರಾವಳಿಯಲ್ಲಿ ಉತ್ತಮ ಕಥಾವಸ್ತುಗಳಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶಗಳಿವೆ ಎಂದು ಹೇಳಿದರು. ತಮ್ಮ ‘ಇಂಬು’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದರು.

ನಿರ್ಮಾಪಕ ಪ್ರಶಾಂತ್ ರೈ ಮಾತನಾಡಿ, ಭಾರತದ ಅನೇಕ ಭಾಷೆಗಳ ನಡುವೆ ತುಳು ಹಾಗೂ ಕನ್ನಡ ಭಾಷೆಯ ಕಲಾವಿದರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಯಾವುದೇ ಕಲಾವಿದ ಸಣ್ಣವನಲ್ಲ ಎಂಬುದನ್ನು ಈ ಪ್ರಶಸ್ತಿಗಳು ಸಾಬೀತುಪಡಿಸಿವೆ ಎಂದರು.

ರೂಪಶ್ರೀ ವರ್ಕಾಡಿ ಮಾತನಾಡಿ, ರೋಹನ್ ಕಾರ್ಪೊರೇಷನ್ ಕಲೆ ಮತ್ತು ಕಲಾವಿದರನ್ನು ಸದಾ ಪ್ರೋತ್ಸಾಹಿಸುತ್ತಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಗೌರವಿಸಿರುವುದು ಸಂತಸದ ಸಂಗತಿ. ತಮಗೆ ದೊರೆತಿರುವ ಈ ಗೌರವವನ್ನು ನಾಡಿನ ಜನತೆಗೆ ಅರ್ಪಿಸುವುದಾಗಿ ಹೇಳಿದರು.

ಡಾ. ಪ್ರದೀಪ್ ಕೆಂಚನೂರು ಮಾತನಾಡಿ, ಕರಾವಳಿಗೆ ಬಂದಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ಸಂಭ್ರಮಿಸಿ ತಮ್ಮನ್ನು ಗೌರವಿಸಿರುವ ರೋಹನ್ ಕಾರ್ಪೊರೇಷನ್‌ಗೆ ಧನ್ಯವಾದ ಸಲ್ಲಿಸಿದರು. ಈ ಪ್ರಶಸ್ತಿ ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದರು.

ರೋಹನ್ ಕಾರ್ಪೊರೇಷನ್‌ನ ಡಿಯೋನ್ ಮೊಂತೆರೋ ಮಾತನಾಡಿ, ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಮಂಗಳೂರು ಹಾಗೂ ಇಲ್ಲಿನ ಸಿನಿಮಾ ರಂಗ ಇನ್ನಷ್ಟು ಬೆಳೆಯಬೇಕಿದೆ. ಕಲಾವಿದರ ಪ್ರತಿಭೆ ಮತ್ತು ಪರಿಶ್ರಮವೇ ಅವರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದೆ ಎಂದರು.

ಇತ್ತೀಚೆಗೆ ನಗರದಲ್ಲಿ ವಿಜೃಂಭಣೆಯಿಂದ ನಡೆದ ‘ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಅಭಿಮಾನಿಗಳು, ಬೆಂಬಲಿಗರು, ಸಹಯೋಗಿಗಳು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತುಷಾನ್ ಸ್ವಾಗತಿಸಿದರು. ಸಾಲೆಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!