ಡಿಸಿಸಿ ಅಧ್ಯಕ್ಷರ ಆಯ್ಕೆಗಾಗಿ ಆಗಸ್ಟ್ 12ರವರೆಗೆ ಸಮಾಲೋಚನೆ: ಎಐಸಿಸಿ ವೀಕ್ಷಕ ಕೆ. ಜಯಂತ್

ಮಂಗಳೂರು, ಜು. 28: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಿರ್ದೇಶನದಂತೆ ‘ಸಂಘಟನ್ ಸೃಜನ್ ಅಭಿಯಾನ’ದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಸಮಾಲೋಚನಾ ಕಾರ್ಯಕ್ರಮ ಮಂಗಳೂರಿನಲ್ಲಿ ಆರಂಭಗೊಂಡಿದ್ದು, ಆಗಸ್ಟ್ 12ರವರೆಗೆ ವಿವಿಧ ಹಂತಗಳಲ್ಲಿ ಸಮಾಲೋಚನೆ ನಡೆಯಲಿದೆ.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ವೀಕ್ಷಕರೂ, ಕೇರಳದ ಕೋಝಿಕ್ಕೋಡ್ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಕೆ. ಜಯಂತ್, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ದೇಶವ್ಯಾಪಿ ಈ ಐತಿಹಾಸಿಕ ಸಂಘಟನಾ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಂದಿನ ಎರಡು ವಾರಗಳ ಅವಧಿಯಲ್ಲಿ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು, ಮಾಜಿ ಪದಾಧಿಕಾರಿಗಳು, ವಿವಿಧ ಘಟಕಗಳ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಂಡಲ ಮಟ್ಟದ ಪದಾಧಿಕಾರಿಗಳು, ತಳಮಟ್ಟದ ಕಾರ್ಯಕರ್ತರು, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ಅಭಿಪ್ರಾಯ ರೂಪಿಸುವವರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಈ ಪ್ರಕ್ರಿಯೆಯು ಕೇವಲ ಡಿಸಿಸಿ ಅಧ್ಯಕ್ಷರ ಆಯ್ಕೆಗೆ ಸೀಮಿತವಾಗಿಲ್ಲ. ಜಿಲ್ಲೆಯ ಕಾಂಗ್ರೆಸ್ ಸಂಘಟನೆಯ ಶಕ್ತಿ ಮತ್ತು ಸವಾಲುಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ, ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.

ಸಮಾಲೋಚನೆಗೆ ಆಗಮಿಸುವ ಪ್ರತಿಯೊಬ್ಬರ ಸಲಹೆ, ಅಭಿಪ್ರಾಯ ಹಾಗೂ ಮೌಲ್ಯಮಾಪನವನ್ನು ದಾಖಲಿಸಿ ಎಐಸಿಸಿ ನಾಯಕತ್ವಕ್ಕೆ ಸಲ್ಲಿಸಲಾಗುವುದು. ಇದು ಸಂಪೂರ್ಣ ಪಾರದರ್ಶಕ, ಪ್ರಜಾಪ್ರಭುತ್ವ ಹಾಗೂ ಸಮಾಲೋಚನಾ ಆಧಾರಿತ ಪ್ರಕ್ರಿಯೆಯಾಗಿದ್ದು, ಪ್ರತಿಯೊಂದು ಅಭಿಪ್ರಾಯಕ್ಕೂ ಸೂಕ್ತ ಗೌರವ ಮತ್ತು ಪರಿಗಣನೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಡಿಸಿಸಿ ಅಧ್ಯಕ್ಷರ ನೇಮಕಾತಿಯ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ಬಳಿಕ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸಂಘಟನಾ ನಾಯಕತ್ವವನ್ನು ಕೇವಲ ಜನಪ್ರಿಯತೆ ಅಥವಾ ಹಿರಿತನದ ಆಧಾರದ ಮೇಲೆ ನಿರ್ಧರಿಸಲಾಗುವುದಿಲ್ಲ. ಬದ್ಧತೆ, ಶಿಸ್ತು, ಪ್ರಾಮಾಣಿಕತೆ, ಸಂಘಟನಾ ಸಾಮರ್ಥ್ಯ, ರಾಜಕೀಯ ಪ್ರೌಢಿಮೆ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಸಾಗುವ ನಾಯಕತ್ವ ಗುಣಗಳು ಅತ್ಯಗತ್ಯ ಎಂದು ಹೇಳಿದರು.

ಡಿಸಿಸಿ ಅಧ್ಯಕ್ಷರ ಹುದ್ದೆಯು ಅತ್ಯಂತ ಮಹತ್ವದ್ದಾಗಿದ್ದು, ಬೂತ್ ಮಟ್ಟದ ಸಮಿತಿಗಳನ್ನು ಬಲಪಡಿಸುವುದು, ಬ್ಲಾಕ್ ಹಾಗೂ ಮಂಡಲ ಘಟಕಗಳೊಂದಿಗೆ ಸಮನ್ವಯ ಸಾಧಿಸುವುದು, ಯುವ ನಾಯಕರನ್ನು ಬೆಳೆಸುವುದು, ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು, ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವುದು ಹಾಗೂ ಜನರ ಸಮಸ್ಯೆಗಳೊಂದಿಗೆ ಪಕ್ಷವನ್ನು ನಿಕಟವಾಗಿ ಜೋಡಿಸುವ ನಾಯಕತ್ವ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಸಂಘಟನ್ ಸೃಜನ್ ಅಭಿಯಾನ’ವು ಕೇವಲ ಹುದ್ದೆಗಳ ನೇಮಕಾತಿಗೆ ಸೀಮಿತವಾಗಿಲ್ಲ. ಬೂತ್ ಮಟ್ಟದಿಂದಲೇ ಪಕ್ಷದ ಸಂಘಟನೆಯನ್ನು ಪುನರುಜ್ಜೀವನಗೊಳಿಸುವುದು, ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದು, ಸಮರ್ಪಿತ ಕಾರ್ಯಕರ್ತರನ್ನು ಸಬಲಗೊಳಿಸುವುದು, ಸಂಘಟನೆಯ ಎಲ್ಲ ಹಂತಗಳಲ್ಲಿ ಸಮನ್ವಯವನ್ನು ವೃದ್ಧಿಸುವುದು ಹಾಗೂ ಜನಸ್ಪಂದನಶೀಲ, ಚುರುಕಾದ ಮತ್ತು ಆಧುನಿಕ ಕಾಂಗ್ರೆಸ್ ಸಂಘಟನೆಯನ್ನು ನಿರ್ಮಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಕೆ. ಜಯಂತ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಶಕುಂತಳ ಶೆಟ್ಟಿ, ಶಶಿಧರ್ ಹೆಗ್ಡೆ, ಸತೀಶ್ ಹಾಗೂ ಸದಾಶಿವ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!