ಮಂಗಳೂರು ಪೊಲೀಸರ ಡ್ರಗ್ಸ್‌ ವಿರುದ್ಧ ದಿಢೀರ್ ಕಾರ್ಯಾಚರಣೆ: 159 ವಿದ್ಯಾರ್ಥಿಗಳ ತಪಾಸಣೆ, ಒಬ್ಬ ಪಾಸಿಟಿವ್

ಮಂಗಳೂರು : ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಡ್ರಗ್ಸ್ ಹಾವಳಿ ವಿರುದ್ಧದ ಸಮರದ ಅಂಗವಾಗಿ ಮಂಗಳೂರು ಪೊಲೀಸರು ದಿಢೀ‌ರ್ ಆಗಿ ವಿದ್ಯಾರ್ಥಿಗಳಿದ್ದ ಬಸ್, ಇನ್ನಿತರ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.

ಮಂಗಳೂರು ಸೆಂಟ್ರಲ್ ಮತ್ತು ದಕ್ಷಿಣ ಉಪ ವಿಭಾಗದ ಎಸಿಪಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಕೋಟೆಕಾರು ಮತ್ತು ಕೋಣಾಜೆ ಬಂಟರ ಸಂಘದಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಕೋಣಾಜೆ, ಉಳ್ಳಾಲ, ಕಂಕನಾಡಿ, ಪಾಂಡೇಶ್ವರ, ಬಂದರು ಠಾಣೆ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದೆ.

ಉಳ್ಳಾಲದ ಕೋಟೆಕಾರಿನಲ್ಲಿ ಮಂಗಳೂರು ಎಸ್ ಡಿಎಂ ಕಾಲೇಜು, ನಿಟ್ಟೆ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ಸೈಂಟ್ ಅಲೋಶಿಯಸ್, ಪಿಎ ಕಾಲೇಜು, ಬ್ಯಾರೀಸ್ ಇನ್ ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಮತ್ತು ಕೆನರಾ ಕಾಲೇಜಿಗೆ ಸೇರಿದ 72 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.

ಕೋಣಾಜೆಯಲ್ಲಿ ಪಿಎ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಎರಡು ಬಸ್ ಗಳನ್ನು ನಿಲ್ಲಿಸಿ 87 ವಿದ್ಯಾರ್ಥಿಗಳನ್ನು ತಪಾಸಣೆ ನಡೆಸಿದ್ದು ಎಲ್ಲರೂ ನೆಗೆಟಿವ್ ಆಗಿದ್ದಾರೆ. ಡ್ರಗ್ ಟೆಸ್ಟಿಂಗ್ ಕಿಟ್ ಗಳನ್ನು ಸ್ಥಳಕ್ಕೆ ಕೊಂಡೊಯ್ದು ಸಂಜೆ 4.30ರಿಂದ 6 ಗಂಟೆ ನಡುವೆ ತಪಾಸಣಾ ಕಾರ್ಯ ಮಾಡಲಾಗಿದೆ. ನಿರಂತರ ತಪಾಸಣೆ ಮತ್ತು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪಾಸಿಟಿವ್ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಕ್ಕೆ ತುತ್ತಾಗುವ ಸಂಖ್ಯೆಯೂ ಇಳಿಕೆಯಲ್ಲಿದೆ. ಆದರೂ ಡ್ರಗ್ಸ್ ಫ್ರೀ ಆಗುವಲ್ಲಿ ಬಹಳಷ್ಟು ಪ್ರಯತ್ನ ಆಗಬೇಕಾಗಿದೆ ಎಂದು ಪೊಲೀಸ್‌ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

ಪಾಸಿಟಿವ್ ಆಗಿರುವ ಒಬ್ಬ ವಿದ್ಯಾರ್ಥಿಯನ್ನು ಕಾನೂನು ರೀತ್ಯ ಕ್ರಮ ಕೈಗೊಂಡ ಬಳಿಕ ಕೌನ್ಸೆಲಿಂಗ್‌ ಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!