ಮಂಗಳೂರು : ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ (ಡಿಕೆಸಿಎ), ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಹಾಗೂ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ (ಕೆಎಸ್ಸಿಎ) ಆಶ್ರಯದಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ ಪ್ರಾಯೋಜಿತ 39ನೇ ರಾಷ್ಟ್ರೀಯ ಅಂಡರ್-11 ಓಪನ್ ಮತ್ತು ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಶಿಪ್-2026 ಆ.2ರಿಂದ 8ರವರೆಗೆ ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚಾಂಪಿಯನ್ಶಿಪ್ನ ಉದ್ಘಾಟನಾ ಸಮಾರಂಭವು ಆ.2ರಂದು ಬೆಳಗ್ಗೆ 11.15 ಗಂಟೆಗೆ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರ, ಕ್ರೀಡಾ ಸಂಸ್ಥೆಗಳು, ಪ್ರಾಯೋಜಕ ಸಂಸ್ಥೆಗಳು ಹಾಗೂ ಚೆಸ್ ಕ್ಷೇತ್ರದ ಗಣ್ಯರು ಭಾಗವಹಿಸಿ ಚಾಂಪಿಯನ್ಶಿಪ್ಗೆ ಚಾಲನೆ ನೀಡಲಿದ್ದಾರೆ.
ದೇಶದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸುವ 641 ಪ್ರತಿಭಾವಂತ ಬಾಲ ಚೆಸ್ ಆಟಗಾರರು ಈ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲಿದ್ದು, ದೇಶದ ಭವಿಷ್ಯದ ಚೆಸ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸಿಕೊಡಲಿದೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಅಖಿಲ ಭಾರತ ಚೆಸ್ ಫೆಡರೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಸಹಕಾರದೊಂದಿಗೆ ನಡೆಯುವ ಈ ಚಾಂಪಿಯನ್ಶಿಪ್ ಕರ್ನಾಟಕವನ್ನು ರಾಷ್ಟ್ರೀಯ ಕ್ರೀಡಾಕೂಟಗಳ ಪ್ರಮುಖ ಆತಿಥೇಯ ರಾಜ್ಯವಾಗಿ ಮತ್ತಷ್ಟು ಗುರುತಿಸಲು ಸಹಕಾರಿಯಾಗಲಿದೆ.
ಸ್ಪರ್ಧೆಯ ಯಶಸ್ವಿ ಆಯೋಜನೆಗಾಗಿ ಅತ್ಯುತ್ತಮ ಆಟದ ವ್ಯವಸ್ಥೆ, ವಸತಿ, ವೈದ್ಯಕೀಯ ಸೌಲಭ್ಯ ಹಾಗೂ ಪಂದ್ಯಗಳ ನೇರ ಪ್ರಸಾರದ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಕೈಗೊಂಡಿದೆ ಎಂದು ಡಿಕೆಸಿಎ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


