ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ (BDNE Trust), ಮಂಗಳೂರು, 2001 ನೇ ಸಾಲಿನಿಂದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವೂ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸಹಕರಿಸುತ್ತಿದೆ.

ಈ ವರ್ಷದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ದಿನಾಂಕ 09.08.2026 ರಂದು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ಇಲ್ಲಿ ಬೆಳಿಗ್ಗೆ ಘಂಟೆ 10 ಕ್ಕೆ ನೆರವೇರಲಿರುವುದು. ಈ ಕಾರ್ಯಕ್ರಮದಲ್ಲಿ ಶ್ರೀ ಜೈರಾಜ್ ಎಚ್ ಸೋಮಸುಂದರಂ, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು, ಡಾ. ಉಮ್ಮಪ್ಪ ಪೂಜಾರಿ ಪಿ, ಮಾಜಿ ಡೀನ್, ಶ್ರೀ ಗೋಕರ್ಣನಾಥೆಶ್ವರ ವಿದ್ಯಾ ಸಂಸ್ಥೆಗಳು, ಮಂಗಳೂರು, ಶ್ರೀಮತಿ ಕ್ರಿತಿನ್ ಡಿ. ಅಮೀನ್, ಟ್ರಸ್ಟಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು, ಶ್ರೀ ಸೀತಾರಾಮ ಎಚ್. ಅಧ್ಯಕ್ಷರು , ಶ್ರೀ ಗುರು ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇವರೆಲ್ಲ ಭಾಗವಹಿಸುವ ಮೂಲಕ ವಿದ್ಯಾರ್ಥಿ ವೇತನವನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರಾಷ್ಟ್ರೀಯ ಕಬ್ಬಡ್ಡಿ ತಂಡದ ಆಟಗಾರ್ತಿ ಮಂಗಳೂರಿನ ಹೆಮ್ಮೆಯ ಕುಮಾರಿ ಧನಲಕ್ಷ್ಮಿ ಪೂಜಾರಿಯವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು.

ಈ ವರ್ಷ ಬಿ.ಡಿ.ಎನ್.ಇ ಯು ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್, ತಾಂತ್ರಿಕತೆ, ಪದವಿ, ಪಿಯುಸಿ ಇತ್ಯಾದಿ ವಿಭಾಗಗಳನ್ನೊಳಗೊಂಡ 200 ವಿದ್ಯಾರ್ಥಿಗಳಿಗೆ ಹಾಗೂ 9 ಅನಾರೋಗ್ಯ ಪೀಡಿತರಿಗೆ ಒಟ್ಟು ಹನ್ನೆರಡು ಲಕ್ಷ ರೂ. ಹಣವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.

ಶ್ರೀ ನಾರಾಯಣ ಗುರುಗಳ ಧ್ಯೇಯ ವಾಕ್ಯದಂತೆ ಸಮಾಜದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಮಹತ್ವವನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಸಂಸ್ಥೆಯು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ. ವಿದ್ಯೆಯನ್ನು ಪಡೆಯದೆ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯಲಾರನು. ವಿದ್ಯೆಯಿಂದ ವಂಚಿತರಾಗುವ ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಲಭಿಸಿದರೆ ಅಂತಹ ವಿದ್ಯಾರ್ಥಿಗಳು ಸಫಲತೆಯನ್ನು ಪಡೆಯುವ ಅವಕಾಶ ಉಜ್ವಲವಾಗುವುದೆಂಬ ಕಳಕಳಿ ಬಿಲ್ಲವಾಸ್ ದುಬಾಯಿ ಸಂಸ್ಥೆಯದ್ದು. ಮುಂದಿನ ದಿನಗಳಲ್ಲಿಯೂ ಸಂಸ್ಥೆಯು ತನ್ನಿಂದಾದ ಸರ್ವ ವಿಧದ ಸಹಕಾರವನ್ನು ನೀಡಲು ಸದಾ ಬದ್ಧವಾಗಿರುವುದೆಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ದೀಪಕ್ ಎಸ್. ಪಿ. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!